ಅಮ್ಮಣಿಚಂಡ ಎಂ. ರಾಜಾ ನಂಜಪ್ಪ, ಸಹಕಾರಿಗಳು: ಕದನೂರು. Kadanur

ಅಮ್ಮಣಿಚಂಡ ಎಂ. ರಾಜಾ ನಂಜಪ್ಪ, ಸಹಕಾರಿಗಳು: ಕದನೂರು. Kadanur


ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಮ್ಮಣಿಚಂಡ ಎಂ. ರಾಜಾ ನಂಜಪ್ಪನವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.


ಡಿಪ್ಲೋಮ ಇನ್‌ ಮೆಕಾನಿಕಲ್‌ ಇಂಜಿನಿಯರ್‌ ಪದವೀಧರರಾದ ರಾಜ ನಂಜಪ್ಪನವರ ತಂದೆ ಅಮ್ಮಣಿಚಂಡ ಎನ್.‌ ಮಂದಣ್ಣನವರು ಶಿಕ್ಷಣ ಇಲಾಖೆಯ ನಿರೀಕ್ಷಕರಾಗಿದ್ದರು. ನಿವೃತಿಯ ನಂತರ ಸಾಮಾಜಿಕ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಕದನೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ತಂದೆಯವರ  ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಯನ್ನು ಮನಗಂಡು ರಾಜಾ ನಂಜಪ್ಪನವರು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳುತ್ತಾರೆ. ತದ ನಂತರ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಪುಲಿಯಂಡ ಅಪ್ಪಯ್ಯನವರ ಒತ್ತಾಸೆಯ ಮೇರೆಗೆ ಸಹಕಾರ ಕ್ಷೇತ್ರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು.


ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 1983ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಗೊಂಡ ರಾಜಾ ನಂಜಪ್ಪನವರು, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ನಿರಂತರವಾಗಿ ನಿರ್ದೆಶಕರಾಗಿದ್ದು, 1993 ರಿಂದ 1996 ರವರಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1997 ರಿಂದ 2005 ರವರಗೆ ತಮ್ಮ ವೈಯುಕ್ತಿಕ ಕಾರಣಗಳಿಂದ ಆಡಳಿತ ಮಂಡಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲಿಲ್ಲ. ಅಲ್ಲಿಂದ 2005 ರಿಂದ 2015 ರವರಗೆ ನಿರ್ದೇಶಕರಾಗಿ ಕಾರ್ಯನಿರ್ವಹಣೆ. 2015ರಿಂದ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 


ರಾಜಾ ನಂಜಪ್ಪನವರು ವಿರಾಜಪೇಟೆ ಎ.ಪಿ.ಸಿ.ಎಂ.ಎಸ್.ನಲ್ಲಿ ಉಪಾಧ್ಯಕ್ಷರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಎ.ಪಿ.ಸಿ.ಎಂ.ಎಸ್.ನಲ್ಲಿ ಹಾರ್ಡ್‌ವೇರ್‌ ವಿಭಾಗ, ಗೊಬ್ಬರ ಗೋದಾಮು ಬ್ಯಾಂಕಿಂಗ್‌ ವ್ಯವಸ್ಥೆ ಮುಂತಾದ ಕಾರ್ಯಗಳಿಗೆ ತಮ್ಮ ಅವಿರತ ಶ್ರಮವನ್ನು ವಿನಿಯೋಗಿಸಿದ್ದಾರೆ.  ವೀರಾಜಪೇಟೆ ಸಹಕಾರ ಯೂನಿಯನ್‌ನಲ್ಲಿ 2015 ರಿಂದ ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿ ಸುಮಾರು 42 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2020-21ರ ಸಾಲಿನಲ್ಲಿ 16 ಲಕ್ಷ 48 ಸಾವಿರ ಲಾಭವನ್ನು ಗಳಿಸಿದೆ ಎಂದ ಸಂಘದ ಅಧ್ಯಕ್ಷರಾದ ರಾಜಾ ನಂಜಪ್ಪನವರು, ಸದಸ್ಯರಿಗೆ ಜಾಮೀನು ಸಾಲ, ಪಿಗ್ಮಿ ಆಧಾರಿತ ಸಾಲ, ಆಭರಣ ಸಾಲ, ವಾಹನ ಸಾಲ, ಕಟ್ಟಡ ಮತ್ತು ಗೃಹ ನಿರ್ಮಾಣ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ, ಜಂಟಿ ಭಾದ್ಯತ ಗುಂಪು ಸಾಲ ಹಾಗೂ ಕೃಷಿ ಸಾಲಗಳಿಂದ ಸಂಘಕ್ಕೆ ಲಾಭ ದೊರಕಿದೆ ಎಂದು ತಿಳಿಸಿದರು ಹಾಗೆ ಸಂಘವು ಸಂಪೂರ್ಣವಾಗಿ ಬ್ಯಾಂಕಿಂಗ್‌ ವ್ಯವಸ್ಥೆಯ ಮುಖಾಂತರ ಕಳೆದ 21 ವರ್ಷಗಳಿಂದ ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ ಎಂದು ರಾಜಾ ನಂಜಪ್ಪನವರು ಈ ಸಂದರ್ಭದಲ್ಲಿ ತಿಳಿಸಿದರು.


ಅಮ್ಮಣಿಚಂಡ ಎಂ. ರಾಜಾ ನಂಜಪ್ಪನವರು ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತಮ್ಮ ಅಧಿಕಾರವಧಿಯಲ್ಲಿ ಸಂಘದ ಅಭಿವೃದ್ಧಿಗೆ ನೀವೇಶನ ಖರೀದಿ, ಸಂಘದ ಆಡಳಿತ ವ್ಯವಸ್ಥೆಯ ಡಿಜಿಟಲಿಕರಣ, ಸಂಘದ ಆಡಳಿತ ಕಚೇರಿಯ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸ, ಸಂಘದ ಸುತ್ತಲಿನ ಆವರಣ ಗೊಡೆ, ಇಂಟರ್‌ ಲಾಕ್‌ ಅಳವಡಿಕೆ, ಗೇಟ್‌ ಹಾಗೂ ಮೇಲ್ಛಾವಣಿಯನ್ನು ಕಾಮಗಾರಿಗಳನ್ನು ಮಾಡಿಸಿದ್ದಾರೆ. ಹಾಗೆ ಉತ್ತಮ ಕಾರ್ಯ ನಿರ್ವಹಣೆಗಾಗಿ ಕೊಡಗು ಡಿಸಿಸಿ ಬ್ಯಾಂಕ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕಿನಿಂದ ಸಂಘಕ್ಕೆ  ಪ್ರಶಸ್ತಿ ದೊರುಕುವಲ್ಲಿ ತಮ್ಮ ಯೋಗದಾನವನ್ನು ನೀಡಿದ್ದಾರೆ.


ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಛೇರಿಯ ನೆಲ ಮಹಡಿಯಲ್ಲಿರುವ ಗೋದಾಮನ್ನು ಸ್ಥಳಾಂತರಿಸಿ ನೂತನ ತಂತ್ರಜ್ಞಾನದೊಂದಿಗೆ ಬ್ಯಾಂಕನ್ನು ಆಧುನಿಕರಣಗೊಳಿಸಿ ವಾಣಿಜ್ಯ ಬ್ಯಾಂಕಿನ ರೀತಿಯಲ್ಲಿ ಸುಸಜ್ಜಿತವಾದ ಬ್ಯಾಂಕಿನ ಆಡಳಿತ ಕಛೇರಿ ನಿರ್ಮಿಸುವ ಯೋಜನೆಯು ಪ್ರಗತಿಯಲ್ಲಿದೆ ಎಂದ ರಾಜಾ ನಂಜಪ್ಪನವರು, ಸುಸಜ್ಜಿತವಾದ ಗೊಬ್ಬರ ಗೋದಾಮು, ಹಾರ್ಡ್‌ವೇರ್‌ ಮಳಿಗೆ ಮಾಡಿ ರೈತರಿಗೆ ಬೇಕಾದ ಕೃಷಿ ಪರಿಕರಗಳ ಮಾರಾಟಕ್ಕೆ ಜಾಗ ಖರೀದಿಸಲು ಪ್ರಯತ್ನ ಸಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

 

ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ವಿತರಿಸಿದ ಸಾಲಗಳ ಶೇಕಡ 93%ರಷ್ಟು ಸಕಾಲದ ಮರುಪಾವತಿಯಾಗಿದ್ದು, ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ರಾಜ ನಂಜಪ್ಪನವರು, ತಿಳಿಸಿದರು.


ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ರಾಜ ನಂಜಪ್ಪನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  


ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ ರಾಜ ನಂಜಪ್ಪನವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.


ರಾಜಕೀಯವಾಗಿ ಗುರುತಿಸಿಕೊಂಡಿರುವ ಅಮ್ಮಣ್ಣಿಚಂಡ ರಾಜ ನಂಜಪ್ಪನವರು, ಆಗಿನ ಕದನೂರು ಮಂಡಲ ಪಂಚಾಯಿತಿಯಲ್ಲಿ 1983 ರಿಂದ 1988ರವರಗೆ ಸದಸ್ಯರಾಗಿ ನಂತರ ಕದನೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. 


ಸಾಮಾಜಿಕ ಕ್ಷೇತ್ರದಲ್ಲಿ ಕದನೂರು ಭಗವತಿ ದೇವಾಲಯದಲ್ಲಿ 15 ವರ್ಷಗಳಿಂದ ನಿರ್ದೆಶಕರಾಗಿ, ಕಾರ್ಯದರ್ಶಿಯಾಗಿ ಹಾಗೆ 7 ವರ್ಷಗಳಿಂದ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಖಿಲ ಕೊಡವ ಸಮಾಜದ ಗೌರವ ಕಾರ್ಯದರ್ಶಿಯಾಗಿದ್ದಾರೆ.


ಶೈಕ್ಷಣಿಕ ಕ್ಷೇತ್ರದಲ್ಲಿ ಕದನೂರು ಪ್ರಾಥಮಿಕ ಶಾಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆ ಅಂಗನವಾಡಿ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ವಿರಾಜಪೇಟೆಯ ತ್ರಿವೇಣಿ ಶಾಲೆಯ ನಿರ್ದೇಶಕರಾಗಿ ಸೇವೆ. ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ನಿರ್ದೇಶಕರಾಗಿ ಸೇವೆ, ಗೊಣಿಕೊಪ್ಪದ ಕಾವೇರಿ ಕಾಲೇಜು ಜಂಟಿ ಕಾರ್ಯದರ್ಶಿಯಾಗಿ ಸೇವೆ. ತಮ್ಮ ಕಾಲೇಜು ದಿನಮಾನಗಳಲ್ಲಿ ಎನ್.ಸಿ.ಸಿ.ಯ ಜೂನಿಯರ್‌ ಅಂಡರ್‌ ಆಫೀಸರ್‌ ಆಗಿ ಸೇವೆ ಸಲ್ಲಿಸಿದ್ದಾರೆ.


ಮೂಲತ: ಕೃಷಿಕರಾಗಿರುವ ಅಮ್ಮಣ್ಣಿಚಂಡ ರಾಜ ನಂಜಪ್ಪನವರು, ತಂದೆ ಅಮ್ಮಣ್ಣಿಚಂಡ ಎನ್.‌ ಮಂದಣ್ಣ ಹಾಗೂ ತಾಯಿ ಗೌರಮ್ಮ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ಬೀನಾ ಮುತ್ತಮ್ಮ ನಿವೃತ್ತ ಶಿಕ್ಷರಾಗಿದ್ದಾರೆ. ಮಗ ಕಾರ್ಯಪ್ಪ ಎಂ.ಬಿ.ಎ. ಪದವಿಧರರಾಗಿದು, ಇನ್‌ಫೋಸಿಸ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಸೊಸೆ ನಿರ್ಜಿತ್‌ ನೀಲಮ್ಮ ಬೆಂಗಳೂರಿನ ಹಮ್ಮಿಂಗ್‌ ಬರ್ಡ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.


ಅಮ್ಮಣ್ಣಿಚಂಡ ರಾಜ ನಂಜಪ್ಪನವರು ಪ್ರಸ್ತುತ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕದನೂರು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 24-12-2021


Search Coorg Media

Coorg's Largest Online Media Network


Previous Post Next Post