ಎಂ. ಎಸ್.‌ ವೆಂಕಟೇಶ್, ಸಹಕಾರಿಗಳು: ಸಿದ್ದಾಪುರ. Siddapura

 ಎಂ. ಎಸ್.‌ ವೆಂಕಟೇಶ್, ಸಹಕಾರಿಗಳು: ಸಿದ್ದಾಪುರ. Siddapura


ಎಂ.‌ಎಸ್.‌ ವೆಂಕಟೇಶ್‌ರವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

1995 ರಲ್ಲಿ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಹುತೇಕ ಸದಸ್ಯರ ಒತ್ತಾಯದ ಮೇರೆಗೆ ಸಂಘದ ಚುನಾವಣೆಗೆ ಸ್ಪರ್ಧಿಸಿದ ಎಂ.‌ಎಸ್.‌ ವೆಂಕಟೇಶ್‌ರವರು ಮೊದಲ ಚುನಾವಣೆಯಲ್ಲೇ ಆಯ್ಕೆಗೊಂಡರು. ಮೊದಲ ಆಯ್ಕೆಯಲ್ಲೇ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1996ರಲ್ಲಿ ಅನಿವಾರ್ಯ ಕಾರಣಗಳಿಂದ ಸಂಘದ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ ಕಾರಣ ಸರ್ವ ಸದಸ್ಯರ ಅಭಿಲಾಷೆಯ ಮೇರೆಗೆ 1996ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ತದ ನಂತರ 1998ರ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಗೊಂಡು ಆಧ್ಯಕ್ಷರಾದ ಎಂ.ಎಸ್.‌ ವೆಂಕಟೇಶ್‌ರವರು, ಅಲ್ಲಿಂದ 2001ರ ಚುನಾವಣೆ, 2006ರ ಚುನಾವಣೆ, 2011ರ ಚುನಾವಣೆ, 2016ರ ಚುನಾವಣೆ ಹಾಗೆ ಕಳೆದ 2020ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಸತತವಾಗಿ 6ನೇ ಅವಧಿಯಲ್ಲೂ ಆಯ್ಕೆಗೊಂಡು ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಸೇವೆ ಮಾಡುವ ಅಭಿಲಾಷೆಯಿಂದ 1991 ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಎಂ.ಎಸ್.‌ ವೆಂಕಟೇಶ್‌ರವರು, ಸರಿ ಸುಮಾರು ಕಳೆದ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

2019-20ರ ಸಾಲಿನಲ್ಲಿ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 92 ಲಕ್ಷ ಲಾಭವನ್ನು ಪಡೆದಿದ್ದು, 2020-21ರ ಸಾಲಿನಲ್ಲಿ 1 ಕೋಟಿಗೂ ಅಧಿಕ ಲಾಭ ಪಡೆದುಕೊಂಡಿದೆ ಎಂದ ಎಂ.ಎಸ್.‌ ವೆಂಕಟೇಶ್‌ರವರು, ಪಿಗ್ಮಿ ಆಧಾರಿತ ಜಾಮೀನು ಸಾಲ, ಆಭರಣ ಅಡಮಾನ ಸಾಲ, ವಾಹನ ಸಾಲ, ಮಧ್ಯಾಮಾವಧಿ ಸಾಲ, ಕೃಷಿ ಸಾಲ, ವೇತನ ಆಧಾರಿತ ಸಾಲ ಹಾಗೂ ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತಿರುವ ಸಾಲಗಳಿಂದ ಸಂಘ ಲಾಭ ಹೊಂದಿದೆ ಎಂದರು. ಹಾಗೆ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಸಕಾಲದ ಮರು ಪಾವತಿ ಹಾಗೂ ಗೊಬ್ಬರ ಮಾರಾಟ, ಕೃಷಿಪರಿಕರಗಳ ಮಾರಾಟದಿಂದಲೂ ಸಂಘವು ಲಾಭ ಪಡೆದಿದೆ ಎಂದರು. ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಡೆಸಲ್ಪಡುತ್ತಿರುವ ಪೆಟ್ರೋಲ್‌ ಬಂಕ್‌ನಿಂದಲೂ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಲಿದೆ ಎಂದು ಈ ಸಂದರ್ಭದಲ್ಲಿ ಎಂ.ಎಸ್.‌ ವೆಂಕಟೇಶ್‌ರವರು ತಿಳಿಸಿದರು. 

ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮೋದಿ ಕೇರ್‌ ಸೆಂಟರ್‌ ಹಾಗೂ ನ್ಯಾಯ ಬೆಲೆ ಅಂಗಡಿ ಕಾರ್ಯಾಚರಿಸುತ್ತಿದ್ದು, ಈ ಹಿಂದೆ ಕೇವಲ ಸಂಘದ ಸದಸ್ಯರಿಗೆ ಮಾತ್ರ ಕನ್ಸ್ಯೂಮರ್ ಕೇಂದ್ರ ರೀತಿ ಕಾರ್ಯಾಚರಿಸುತ್ತಿದ್ದ ಡೀಸೆಲ್‌ ಬಂಕ್‌ನ್ನು ಪೆಟ್ರೋಲ್‌ ಬಂಕ್ ಆಗಿ ಪರಿವರ್ತಿಸಿ  ಕಿಶಾನ್‌ ಸೇವಾ ಕೇಂದ್ರ ಎಂದು ಸಾರ್ವಜನಿಕರ ಸೇವೆಗೆ ಅನುವು ಮಾಡಿ ಕೊಡಲಾಗಿದೆ. ಸಿದ್ದಾಪುರ ಮಾರ್ಕೆಟ್‌ ಬಳಿ ಸಂಘದ ಸ್ವಾಧೀನದಲ್ಲಿರುವ 25 ಸೆಂಟ್‌ ನಿವೇಶನದಲ್ಲಿ ಸುಸಜ್ಜಿತ ಗೋದಾಮು ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂದು ತಮ್ಮ ಅಧಿಕಾರವಧಿಯಲ್ಲಿನ ಸಾಧನೆಗಳ ಬಗ್ಗೆ ಎಂ.ಎಸ್.‌ ವೆಂಕಟೇಶ್‌ರವರು ತಿಳಿಸಿದರು. 

 ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು   ರೈತರಿಗೆ   ಹಲವಾರು ಬಾರಿ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಿತು ಎಂದ ಎಂ.ಎಸ್.‌ ವೆಂಕಟೇಶ್‌ರವರು, ಕಾಫಿ ಮಂಡಳಿ ಹಾಗೂ ಸಂಬಾರ ಮಂಡಳಿ ಸಹಯೋಗದಲ್ಲಿ ರೈತರಿಗೆ ಕೃಷಿ ವಿಚಾರ ಸಂಕೀರ್ಣಗಳನ್ನು ಏರ್ಪಡಿಸಲಾಗಿತ್ತು ಎಂದರು. ರೈತರಿಗೆ ವಿವಿಧ ರೀತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ  ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಸೇವಾ ಕಾರ್ಯವನ್ನು ಮಾಡುತ್ತಿದೆ ಎಂದು ಎಂ.ಎಸ್.‌ ವೆಂಕಟೇಶ್‌ರವರು ಈ ಸಂದರ್ಭದಲ್ಲಿ ತಿಳಿಸಿದರು.

ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸತತವಾಗಿ ಕೊಡಗು ಡಿ.ಸಿ.ಸಿ. ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ ಎಂದ ಎಂ.ಎಸ್.‌ ವೆಂಕಟೇಶ್‌ರವರು, ಪಾರದರ್ಶಕ ಆಡಳಿತಕ್ಕಾಗಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದಲೂ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ ಎಂದರು. 

ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಎಂ.ಎಸ್.‌ ವೆಂಕಟೇಶ್‌ರವರು ತಿಳಿಸಿದರು.

ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈಗಿನ ಹಳೆ ಕಟ್ಟಡವನ್ನು ಕೆಡವಿ ಒಂದು ಸುಸಜ್ಜಿತವಾದ ಆಡಳಿತ ಕಚೇರಿ, ಸಭಾಂಗಣ ಹಾಗೂ ವಾಣಿಜ್ಯ ಸಂಕೀರ್ಣವನ್ನು ಸುಮಾರು 2 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸುವ ನಿಟ್ಟಿನಲ್ಲಿ ಕ್ರೀಯಾ ಯೋಜನೆಯನ್ನು ರೂಪಿಸಲಾಗಿದೆ ಎಂದ ಎಂ.ಎಸ್.‌ ವೆಂಕಟೇಶ್‌ರವರು, ಸಂಘದಿಂದ  ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್.ಪಿ.ಜಿ. ಗ್ಯಾಸ್‌ ಸಿಲಿಂಡರ್ ಬಂಕ್‌ ಒಂದನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದು ತಮ್ಮ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ವಿವರಿಸಿದರು.

ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಪೂರ್ಣ ಮಟ್ಟದಲ್ಲಿ ಇರಬಾರದು ಎಂದ ಎಂ.ಎಸ್.‌ ವೆಂಕಟೇಶ್‌ರವರು, ಸರ್ಕಾರವು ಸಹಕಾರ ಸಂಘಗಳ ಮೇಲೆ ಸ್ವಲ್ಪ ಮಟ್ಟಿನಲ್ಲಿ ನಿಗಾ ವಹಿಸಿದರೆ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ತಮ್ಮ ಸಲಹೆಗಳನ್ನು ತಿಳಿಸಿದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಮುಂದಿನ ಯುವಶಕ್ತಿಗೆ ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಎಂ.ಎಸ್.‌ ವೆಂಕಟೇಶ್‌ರವರು,   ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ನಾಲ್ಕು ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  ವೀರಾಜಪೇಟೆ ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿ ಸೇವೆ. ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ ಪಕ್ಷದ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ಎಂ.ಎಸ್.‌ ವೆಂಕಟೇಶ್‌ರವರು, ವೀರಾಜಪೇಟೆ ಬಾರ್‌ ಅಸೋಸಿಯೇಷನ್‌ನ ಕಾರ್ಯದರ್ಶಿಗಳಾಗಿ, ಉಪಾಧ್ಯಕ್ಷರುಗಳಾಗಿ ಸೇವೆ. ಫಾಸ್ಟ್‌ ಟ್ರಾಕ್‌ ಕೋರ್ಟ್‌ನ ಸರಕಾರಿ ಅಭಿಯೋಜಕರಾಗಿ ಸೇವೆ. ಸಿದ್ದಾಪುರ ಚೇಂಬರ್‌ ಆಪ್‌ ಕಾಮರ್ಸ್‌ನ ಅಧ್ಯಕ್ಷರಾಗಿ ಸೇವೆ. ಕನ್ನಡ ಸಾಹಿತ್ಯ ಪರಿಷತ್‌ನ ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷರಾಗಿ ಸೇವೆ.  ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಕಾರ್ಯದರ್ಶಿಗಳಾಗಿ ಸೇವೆ. 2015 ರಿಂದ ವೀರಾಜಪೇಟೆ ತಾಲ್ಲೂಕಿನ ನೋಟರಿಯಾಗಿ ಪ್ರಸ್ತುತ ಸೇವೆ. ಕೊಡಗು ಜಿಲ್ಲಾ ಅಮೇಚೂರು ಕಬ್ಬಡ್ಡಿ  ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಾ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಎಂ.ಎಸ್.‌ ವೆಂಕಟೇಶ್‌ರವರು ಸಿದ್ದಾಪುರದ ಸೆಂಟ್‌ ಆನ್ಸ್‌ ಫ್ರೌಡಶಾಲೆಯ ಕಾನೂನು ಸಲಹೆಗಾರರಾಗಿ, ನಿರ್ದೆಶಕರಾಗಿ ಶಾಲಾಭಿವೃದ್ಧಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಾ ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ವಕೀಲರು ಹಾಗೂ ಮೂಲತಃ ಕೃಷಿಕರಾಗಿರುವ ಎಂ.ಎಸ್.‌ ವೆಂಕಟೇಶ್‌ರವರು, ದಿವಂಗತ ಶ್ರೀಧರ್‌ ಎಂ.ಕೆ. ಹಾಗೂ ಲಕ್ಷ್ಮಿ ಎಂ.ಎಸ್. ದಂಪತಿಗಳ ಮಗನಾಗಿದ್ದಾರೆ. ಎಂ.ಎಸ್.‌ ವೆಂಕಟೇಶ್‌ರವರ ಪತ್ನಿ ಆಶಾ ವೆಂಕಟೇಶ್ ಗೃಹಿಣಿ. ಮಕ್ಕಳಾದ ಹರ್ಷ ಇಂಜಿನಿಯರಿಂಗ್‌ ಪದವಿಧರರಾಗಿದ್ದು ಪ್ರಸ್ತುತ ಪ್ರತಿಷ್ಠಿತ ಇನ್‌ಪೋಸಿಸ್‌ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೋರ್ವ ಮಗ ಆದರ್ಶ್ ಪ್ರಥಮ ವರ್ಷದ ಇಂಜಿನಿಯರಿಂಗ್‌ ವ್ಯಾಸಾಂಗ ನಿರತರಾಗಿದ್ದಾರೆ. 

ಎಂ.ಎಸ್.‌ ವೆಂಕಟೇಶ್‌ರವರು, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದಲ್ಲಿ ಪ್ರಸ್ತುತ ಕುಟುಂಬ ಸಮೇತ ನೆಲೆಸಿದ್ದಾರೆ. ಎಂ.ಎಸ್.‌ ವೆಂಕಟೇಶ್‌ರವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 20-07-2021


Search Coorg Media

Coorg's Largest Online Media Network 


Previous Post Next Post