Header Ads Widget

Responsive Advertisement

ಕೊಂಗಂಡ. ಪಿ. ವಾಸು ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe

ಕೊಂಗಂಡ. ಪಿ. ವಾಸು  ಮುದ್ದಯ್ಯ, ಸಹಕಾರಿಗಳು: ರುದ್ರುಗುಪ್ಪೆ. Rudraguppe


ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಂಗಂಡ ಪಿ. ವಾಸು  ಮುದ್ದಯ್ಯನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

1994ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡ ಶ್ರೀಯುತರು ಸಾಮಾಜಿಕ ಕಳಕಳಿ ಸಮಾಜಸೇವೆ ಮಾಡುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. 1994ರಲ್ಲಿ ಮೊದಲ ಬಾರಿಗೆ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡ ವಾಸು ಮುದ್ದಯ್ಯನವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ಸತತವಾಗಿ 2013ರವರೆಗೆ ನಿರ್ದೇಶಕರಾಗಿ ಸೇವೆಸಲ್ಲಿಸಿದರು. 2013ರಲ್ಲಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಕಳೆದ 35 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಾಗೆ  ಸಹಕಾರ ಭಾರತಿ ಸಂಘಟನೆಯ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

2020-21 ರ ಸಾಲಿನಲ್ಲಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 9.85 ಲಕ್ಷಗಳ ಲಾಭವನ್ನು ಗಳಿಸಿದ್ದು, ಶೇಕಡ 99% ಸಾಲ ಮರುಪಾವತಿಯಾಗಿದೆ ಎಂದು ವಾಸು  ಮುದ್ದಯ್ಯನವರು ತಿಳಿಸಿದರು. ಸಂಘದ ವತಿಯಿಂದ ಗೊಬ್ಬರ ಮಾರಾಟವು ದಾಖಲೆಯಾಗಿದ್ದು, ಜಾಮೀನು ಸಾಲ, ವಾಹನ ಸಾಲ, ಕೃಷಿಯೇತರ ಸಾಲ, ಮಧ್ಯಮಾವಧಿ ಸಾಲ, ಕೆಸಿಸಿ ಸಾಲ ಹಾಗೂ ಸಭಾಂಗಣದಿಂದ ಬಾಡಿಗೆ ರೂಪದ ಆದಾಯ ಇವುಗಳಿಂದಾಗಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ಈ ಸಂದರ್ಭದಲ್ಲಿ  ತಿಳಿಸಿದರು.  


ಸರಿ ಸುಮಾರು 50 ಲಕ್ಷ ವೆಚ್ಚದಲ್ಲಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗೋದಾಮು, ಆಡಳಿತ ಕಚೇರಿ ಹಾಗೂ ಸಭಾಂಗಣ  ನಿರ್ಮಾಣ ಮಾಡಲಾಗಿದ್ದು, ಸಂಘದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲಿಕರಣ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದು ವಾಸು ಮುದ್ದಯ್ಯನವರು ತಿಳಿಸಿದರು. ಶಾಸಕರ ನಿಧಿಯಿಂದ 5ಲಕ್ಷ ವೆಚ್ಚದಲ್ಲಿ ಸಂಘದ ಸುತ್ತಲಿನ ಆವರಣಗೊಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಹಾಗೆ ಸಂಘದ ಮೊದಲನೇ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಆಡಳಿತ ಮಂಡಳಿಯ ಸಭಾಂಗಣ ಮಾಡುವ ಕ್ರೀಯಾ ಯೋಜನೆಯಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಕಾರ್ಯನಿರ್ವಹಣೆಗಾಗಿ ಬಹುಮಾನವನ್ನು ಪಡೆದುಕೊಂಡಿದೆ. ಜೊತೆಗೆ ಅಪೆಕ್ಸ್ ಬ್ಯಾಂಕಿನಿಂದಲೂ ಪ್ರಶಸ್ತಿ ಪಡೆದುಕೊಂಡಿದೆ ಎಂದ ವಾಸು ಮುದ್ದಯ್ಯನವರು, ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ವಾಸು ಮುದ್ದಯ್ಯನವರು, ತಿಳಿಸಿದರು.


ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ವಾಸು ಮುದ್ದಯ್ಯನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಪೂರ್ಣ ಮಟ್ಟದಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  


ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ವಾಸು ಮುದ್ದಯ್ಯನವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.


ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಾಸು ಮುದ್ದಯ್ಯನವರು, 1994ರಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಿಟ್ಟಂಗಾಲ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ, ಬಿಜೆಪಿ ಕೃಷಿ ಮೋರ್ಚಾ ಸದಸ್ಯರಾಗಿ, ಬಿಜೆಪಿ ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷರಾಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾಗಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾಗಿ, ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ  ಕುಟ್ಟಂದಿ ಪ್ರೌಢಶಾಲೆಯ ಕ್ರೀಡಾ ಸಮಿತಿ ಸದಸ್ಯರಾಗಿ ಹಾಗೂ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.


ಮೂಲತಃ ಕೃಷಿಕರಾಗಿರುವ ಕೊಂಗಂಡ.ಪಿ.ವಾಸು ಮುದ್ದಯ್ಯನವರು ತಂದೆ ಕೊಂಗಂಡ ಎಸ್. ಪೊನ್ನಪ್ಪ ತಾಯಿ ದೇಚ್ಚವ್ವ ದಂಪತಿಯ ಹಿರಿಯ ಮಗನಾಗಿದ್ದಾರೆ. ಪತ್ನಿ ಶೋಭಾ ಗೃಹಿಣಿಯಾಗಿದ್ದಾರೆ. ಹಿರಿಯ ಮಗ ಸೊಮಣ್ಣ ಹಾಗು ಕಿರಿಯ ಮಗ ಪೊನ್ನಣ್ಣ ಉದ್ಯೋಗಿಗಳಾಗಿದ್ದಾರೆ. 


ಕೊಂಗಂಡ.ಪಿ.ವಾಸು  ಮುದ್ದಯ್ಯನವರು ಪ್ರಸ್ತುತ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ  ವಿ. ಬಾಡಗ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 05-01-2022

Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"
ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.