ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane

ಅಪ್ಪನೆರವಂಡ ಎಂ. ಪೂವಯ್ಯ(ರಾಜಾ), ಸಹಕಾರಿಗಳು: ಪಾರಾಣೆ. Parane


ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಣಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪೂವಯ್ಯನವರು. 2013ರ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಗೊಂಡರು. ನಂತರ 2018ರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡು ಮರಳಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2-12-2020ರಲ್ಲಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಧಿಕಾರ ವಹಿಸಿಕೊಂಡು ಪ್ರಸ್ತುತ ಸೇವೆಯಲ್ಲಿದ್ದಾರೆ. 1989ರಲ್ಲಿ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವನ್ನು ಪಡೆದ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ಸರಿ ಸುಮಾರು 32 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದ್ದು, ಸದಸ್ಯರಿಗೆ ನೀಡಿದ ಸಾಲಗಳ ಸಕಾಲ ಮರುಪಾವತಿ, ಜಾಮೀನು ಸಾಲವನ್ನು ದೊಡ್ಡ ಮಟ್ಟದಲ್ಲಿ ಅಂದರೆ 2ಕೋಟಿಗೂ ಮಿಗಿಲಾದ ಸಾಲವನ್ನು ನೀಡಲಾಗಿತ್ತು ಎಂದು ಪೂವಯ್ಯನವರು ತಿಳಿಸಿದರು. ಅದರೊಂದಿಗೆ ಆಭರಣ ಸಾಲ, ವಾಹನ ಸಾಲ, ಗೊಬ್ಬರ ಸಾಲ, ಕೆ.ಸಿ.ಸಿ. ಸಾಲ, ಗೃಹೋಪಯೋಗಿ ಬಳಕೆ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ಇವುಗಳಿಂದ ಸಂಘವು ಲಾಭಹೊಂದಿದೆ ಎಂದು ತಿಳಿಸಿದರು. ಹಾಗೆ ಸಂಘದ ವತಿಯಿಂದ ನಡೆಯುತ್ತಿದ್ದ ಅಕ್ಕಿ ಗಿರಣಿಯು ಪಾಳುಬಿದ್ದಿತ್ತು ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ಆಗಿ ಪರಿವರ್ತಿಸಲಾಗಿದ್ದು, ಅದನ್ನು ಬಾಡಿಗೆಗೆ ನೀಡಲಾಗಿದೆ ಎಂದು ತಿಳಿಸಿದರು.

ಸಂಘವು ಗೊಬ್ಬರ ಮಾರಾಟದಿಂದ ಲಾಭ ಪಡೆದಿದ್ದು, ಅದರ ಜೊತೆಯಲ್ಲಿ ಸಂಘದ 2 ಏಕರೆ ಜಾಗದಲ್ಲಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ಉಳಿದ ಜಾಗದಲ್ಲಿ ಕಾಫಿ ಕೃಷಿ ಹಾಗೂ ಅಡಿಕೆ ಕೃಷಿ ಮಾಡಲಾಗುತ್ತಿದ್ದು, ಇದರಿಂದಲು ಸಂಘವು ಆದಾಯವನ್ನು ಪಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ಪೂವಯ್ಯನವರು ತಿಳಿಸಿದರು. 

ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2020-21ರಲ್ಲಿ 22ಲಕ್ಷದ 19ಸಾವಿರದ 654ರೂಪಾಯಿಗಳಷ್ಟು ಲಾಭವನ್ನು ಪಡೆದಿದೆ ಎಂದು ತಿಳಿಸಿದ ಪೂವಯ್ಯನವರು, 2020-21 ನೇ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇಕಡ 11%ರಷ್ಟು ಡಿವಿಡೆಂಡ್‌ ವಿತರಿಸಲಾಗುತಿದೆ ಎಂದರು. ಹಾಗೆ ನಷ್ಟದಲ್ಲಿ ಸಾಗಿ ಪಾಳುಬಿದ್ದಿದ್ದ ಅಕ್ಕಿ ಗಿರಣಿಯನ್ನು ಕಾಫಿಕ್ಯೂರಿಂಗ್‌ ಆಗಿ ಪರಿವರ್ತನೆ ಮಾಡಿ ಬಾಡಿಗೆಗೆ ನೀಡಲಾಗಿದ್ದು, ಸಂಘದ ಅಧೀನದಲ್ಲಿದ್ದ ಸುಮಾರು 2 ಏಕೆರ ಜಾಗದಲ್ಲಿದ್ದ, ಕಾಡು ಕಲ್ಲುಗಳನ್ನು ಅಗೆದು ತೆಗೆಸಿ ಅಲ್ಲಿ ಕಾಫಿ ಹಾಗೂ ಅಡಿಕೆ ಕೃಷಿ ಮಾಡುವ ನಿಟ್ಟಿನಲ್ಲಿ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ತಮ್ಮ ಅಧಿಕಾರವಧಿಯಲ್ಲಿ ಶ್ರಮಿಸಿದ್ದಾರೆ.  ಸಂಘದ ಶಿಥಿಲಾವಸ್ಥೆಯಲ್ಲಿದ್ದ ಹಳೆ ಕಟ್ಟಡವನ್ನು ಕೆಡವಿ 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ಗೋದಾಮು, ವಾಣಿಜ್ಯ ಮಳಿಗೆ, ನ್ಯಾಯಬೆಲೆ ಅಂಗಡಿ ಹಾಗೂ ಕೃಷಿಪರಿಕರಗಳ ಮಾರಾಟ ಮಳಿಗೆಯನ್ನು ಪ್ರಾರಂಭಿಸಲು ಶ್ರಮಿಸಿದ್ದಾರೆ.

ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಪೂವಯ್ಯನವರು, ತಿಳಿಸಿದರು. ಹಾಗೆ ಇವರೆಲ್ಲ ಸಹಕಾರದಿಂದ ಸಂಘವು  ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನಿಂದ ಹಾಗೂ ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಕಾರ್ಯ ನಿರ್ವಹಣೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಪೂವಯ್ಯನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ ಪೂವಯ್ಯನವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಪೂವಯ್ಯನವರು ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕಿರುಂದಾಡು ಭಗವತಿ ದೇವಾಲಯದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಕಿರುಂದಾಡುವಿನಲ್ಲಿ ಪಾಲುಬಿದ್ದಿದ್ದ ವಿಷ್ಣುದೇವಾಲಯವನ್ನು ಊರವರ ಸಹಕಾರದಿಂದ ಜೀರ್ಣೋದ್ದಾರ ಗೊಳಿಸಿದ್ದಾರೆ. ಶೈಕ್ಷಣಿಕವಾಗಿ ಪಾರಾಣೆ ಫ್ರೌಡಶಾಲೆಯ ಅಭಿವೃದ್ದಿ ಸಮಿತಿಯ ಸದಸ್ಯರಾಗಿದ್ದಾರೆ. ಕಿರುಂದಾಡು ಶಾಲೆಗೆ ಜಾಗವನ್ನು ದಾನವಾಗಿ ನೀಡಿದ್ದಾರೆ.

ಮೂಲತ: ಕೃಷಿಕರಾಗಿರುವ ಅಪ್ಪನೆರವಂಡ ಎಂ. ಪೂವಯ್ಯ(ರಾಜಾ)ರವರು ತಂದೆ ದಿವಂಗತ ಅಪ್ಪನೆರವಂಡ ಮಂದಣ್ಣ ಹಾಗೂ ತಾಯಿ ದಿವಂಗತ ಕಾಮವ್ವ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ಕೆ.ಎಂ. ದೇಚ್ಚಮ್ಮ ಬಲ್ಲಮಾವಟಿ ಶಾಲೆಯ ಶಿಕ್ಷಕರಾಗಿದ್ದಾರೆ. ಹಿರಿಯ ಮಗಳು ತಸ್ಮಾ ವಿವಾಹಿತರಾಗಿ ಮಡಿಕೇರಿಯಲ್ಲಿ ನೆಲೆಸಿದ್ದಾರೆ. ದ್ವಿತಿಯ ಪುತ್ರಿ ತನ್ಯಾ ಕಾನೂನು ಪಧವಿಧರರಾಗಿದ್ದಾರೆ. ಮಗ ತರುಣ್‌ ಮಾಚ್ಚಯ್ಯ ಪಧವಿ ವ್ಯಾಸಂಗ ನಿರತರಾಗಿದ್ದಾರೆ.

ಅಪ್ಪನೆರವಂಡ ಎಂ.ಪೂವಯ್ಯ(ರಾಜಾ)ರವರು ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಿರುಂದಾಡು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 25-08-2021


Search Coorg Media

Coorg's Largest Online Media Network


Previous Post Next Post