ಬೊಳಕಾರಂಡ ಪಿ.ಅಯ್ಯಣ್ಣ, ಸಹಕಾರಿಗಳು: ಪಾಲಂಗಾಲ. Palangala

ಬೊಳಕಾರಂಡ ಪಿ.ಅಯ್ಯಣ್ಣ, ಸಹಕಾರಿಗಳು: ಪಾಲಂಗಾಲ. Palangala 


ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(A.P.C.M.S.) ಅಧ್ಯಕ್ಷರಾಗಿ ಬೊಳಕಾರಂಡ ಪಿ.ಅಯ್ಯಣ್ಣ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೀಯುತರು 2005ರಲ್ಲಿ ವಿರಾಜಪೇಟೆ ಎ.ಪಿ.ಸಿ.ಎಂ.ಎಸ್.‌ ನ  ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2005-10ರ ಅವಧಿ ಹಾಗೂ  2010-15ರ ಅವಧಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ  2015ರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು 2015 ರಿಂದ 2020ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಈಗ 2020ರಿಂದ ಆಡಳಿತ ಮಂಡಳಿಗೆ ಅವಿರೋಧವಾಗಿ ಮರು ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಿ ಸುಮಾರು 37 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ಮನೋಭಾವದಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ ಎಂದು ಬೊಳಕಾರಂಡ ಪಿ.ಅಯ್ಯಣ್ಣನವರು, 2020-21 ರಲ್ಲಿ 3.50 ಲಕ್ಷ  ರೂಪಾಯಿಗಳ ಲಾಭವನ್ನು ವಿರಾಜಪೇಟೆ ಎ.ಪಿ.ಸಿ.ಎಂ.ಎಸ್. ಗಳಿಸಿದೆ ಎಂದರು. ವ್ಯಾಪಾರ, ಕೃಷಿ ಪರಿಕರಗಳ ಮಾರಾಟ, ಕೀಟನಾಶಕ-ಕ್ರಿಮಿನಾಶಕಗಳಂತಹ ಔಷಧಿಗಳ ಮಾರಾಟ, ಗೊಬ್ಬರ ಮಾರಾಟ ರೈತರ ಕಾಫಿ, ಕಾಳುಮೆಣಸುಗಳನ್ನು ಸಂಘದಲ್ಲಿ ದಾಸ್ತಾನು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ  ಹಾಗೂ  ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮುಂತಾದ ಮೂಲಗಳಿಂದ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಬೊಳಕಾರಂಡ ಪಿ.ಅಯ್ಯಣ್ಣನವರು ವಿರಾಜಪೇಟೆ ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷರಾದ ಸಂದರ್ಭ ಸಂಘದ, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ ರೈತರಿಗೆ ಅನುಕೂಲಕರವಾಗಲೆಂದು  ಹತ್ಯಾರು ವಿಭಾಗವೊಂದನ್ನು ವಿರಾಜಪೇಟೆಯ ಚಿಕ್ಕಪೇಟೆ, ಛತ್ರಕೆರೆ ಹತ್ತಿರವಿರುವ ಸಂಘದ ನಿವೇಶನದಲ್ಲಿ ಪ್ರಾರಂಭಿಸಿದರು. 

2016ರಲ್ಲಿ ಉತ್ತಮ ಕಾರ್ಯ ನಿರ್ವಹಣೆಗೆ ಕೆ.ಡಿ.ಸಿ.ಸಿ. ಬ್ಯಾಂಕ್ ನಿಂದ  ಪ್ರಶಸ್ತಿಯನ್ನು ವಿರಾಜಪೇಟೆ ಎ.ಪಿ.ಸಿ.ಎಂ.ಎಸ್.‌ ಪಡೆದುಕೊಂಡಿದೆ. ಎMದು ತಿಳಿಸಿದರು. ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.   

ವೀರಾಜಪೇಟೆ ಪಟ್ಟಣದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆಯಲ್ಲಿರುವ ವಿರಾಜಪೇಟೆ ಎ.ಪಿ.ಸಿ.ಎಂ.ಎಸ್.ನ ಮುಖ್ಯ ಆಡಳಿತ ಕಚೇರಿಯನ್ನು ನವೀಕರಣ ಮಾಡುವ ಯೋಜನೆ,  ಹತ್ಯಾರು ಮಳಿಗೆಯ ಆಧುನೀಕರಣ, ಸುಸಜ್ಜಿತ ಸಭಾಂಗಣ ಹಾಗೂ ಸಂಘವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಅಭಿಲಾಷೆಯನ್ನು ಹೊಂದಿರುವುದಾಗಿ ತಮ್ಮ  ಕ್ರಿಯಾಯೋಜನೆಗಳ ಬಗ್ಗೆ ತಿಳಿಸಿದರು.

ಸರಕಾರದ ಹಸ್ತಕ್ಷೇಪ  ಸಹಕಾರ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಇರಬಾರದು ಆದರೂ ಮೇಲ್ನೋಟಕ್ಕೆ ಇದ್ದರೆ ತಪ್ಪಾಗಲಿಕ್ಕಿಲ್ಲ ಎಂಬುದಾಗಿ ತಮ್ಮ ಅಭಿಪ್ರಾಯನ್ನು ತಿಳಿಸಿದರು. ಒಂದು ಸಹಕಾರ ಸಂಘವು ದೀರ್ಘಕಾಲದ ಮಟ್ಟಿಗೆ ಪ್ರಗತಿಯತ್ತ ಸಾಗಲು….

* ಸಹಕಾರ ತತ್ವಗಳ ಆಧಾರದ ಮೇಲೆ ಆಡಳಿತ ನಡೆಸುವ ಬದ್ದತೆ ಇರಬೇಕು.

* ತಮ್ಮ ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ಸದಸ್ಯರು ಹಾಗೂ ಸಾರ್ವಜನಿಕರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಅರಿವಿರಬೇಕು.

* ಪ್ರಾಮಾಣಿಕ, ದಕ್ಷ ಹಾಗೂ ಕ್ರಿಯಾಶೀಲ ಆಡಳಿತ ವ್ಯವಸ್ಥೆ ಇರಬೇಕು..

* ನಿಗದಿತವಾಗಿ ಆಡಳಿತ ಮಂಡಳಿ ಸಭೆ ನಡೆಸುವುದು.

* ಸದಸ್ಯರಿಗೆ ಸಕಾಲಕ್ಕೆ ಮಾಹಿತಿ ನೀಡುವುದು.

* ಸಕಾಲಕ್ಕೆ ಲಾಭ ಪರಿಶೀಲನೆ ಮತ್ತು ಆಡಿಟಿಂಗ್ ಮಾಡಿಸುವುದು. 

* ಸರ್ಕಾರದ ನಿಯಮದಂತೆ ಮಹಾಸಭೆ ನಡೆಸುವುದು.

ಮುಂತಾದ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿರಬೇಕು. ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತವೇ ಸಹಕಾರ ಕ್ಷೇತ್ರ ಶಾಶ್ವತವಾಗಿ ಮುಂದುವರೆಯಲು ಸಾಧ್ಯ ಹಾಗೆ ಒಂದು ಸಹಕಾರ ಸಂಸ್ಥೆಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಸಹಕಾರ ಉತ್ತಮ ರೀತಿಯಲ್ಲಿ ಇದ್ದಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ನಡೆಯಲು ಸಾಧ್ಯವೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ  ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಅಯ್ಯಣ್ಣನವರು, ಸಹಕಾರ ಕ್ಷೇತ್ರದಲ್ಲಿ 2015 ರಿಂದ 2020 ರವರೆಗೆ ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ. 2005 ರಿಂದ 2010 ರವರೆಗೆ ಗೋಣಿಕೊಪ್ಪಲು ಎ.ಪಿ.ಎಂ.ಸಿ. ಯ ನಿರ್ದೇಶಕರಾಗಿ ಸೇವೆ. ರಾಜಕೀಯವಾಗಿ ವಿರಾಜಪೇಟೆ ತಾಲೂಕು ಬಿ.ಜೆ.ಪಿ. ಕಾರ್ಯದರ್ಶಿಯಾಗಿ ಉಪಾಧ್ಯಕ್ಷರಾಗಿ  ಹಾಗೂ ಬಿ.ಜೆ.ಪಿ. ಜಿಲ್ಲಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕವಾಗಿ ಕಡಂಗಮರೂರುವಿನ “ನೇಟಿವ್ ಕ್ಲಬ್”ನ ಸ್ಥಾಪಕ ಸದಸ್ಯರಾಗಿ ಹಾಗೂ ಕಾರ್ಯದರ್ಶಿಯಾಗಿ 10 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಪಾಲಂಗಾಲ ಪೋಟೋಡ ಶ್ರೀ ಭದ್ರಕಾಳಿ ದೇವಾಲಯ ಸಮಿತಿ ಸದಸ್ಯರಾಗಿ ಸೇವೆ. ಶೈಕ್ಷಣಿಕವಾಗಿ ಕಡಂಗ ವಿಜಯ ವಿದ್ಯಾಸಂಸ್ಥೆಯ ಸದಸ್ಯರಾಗಿ, ನಿರ್ದೇಶಕರಾಗಿ ಪ್ರಸ್ತುತ  ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಯ್ಯಣ್ಣನವರ ತಂದೆ ದಿವಂಗತ ಬೊಳಕಾರಂಡ ಎ. ಪೊನ್ನಪ್ಪ ಹಾಗೂ ತಾಯಿ ದಿವಂಗತ ಚೋಂದವ್ವ ದಂಪತಿಗಳ ಪುತ್ರರಾಗಿದ್ದಾರೆ. ಪತ್ನಿ ಬಿ.ಎ. ಭಾರತಿ ಗೃಹಿಣಿಯಾಗಿದ್ದು, ನಿವೃತ್ತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಗಗನ್ ಗಣಪತಿ ಜರ್ಮನಿಯ Ganpet ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಮಗಳು ಬಿ.ಎ. ಶೀತಲ್ ಕಲಿಯಂಡ ಕುಟುಂಬದಲ್ಲಿ ವಿವಾಹಿತರಾಗಿ ಪ್ರಸ್ತುತ ಸಕಲೇಶಪುರದಲ್ಲಿ ನೆಲೆಸಿದ್ದಾರೆ.

ಮೂಲತಃ ಕೃಷಿಕರಾಗಿರುವ 67 ವರ್ಷ ಪ್ರಾಯದ  ಅಯ್ಯಣ್ಣನವರು, ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾಂಗಾಲ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 10-12-2021


Search Coorg Media

Coorg's Largest Online Media Network

Previous Post Next Post