ಮೂಕೋಂಡ ಪಿ. ಶಶಿ ಸುಬ್ರಮಣಿ, ಸಹಕಾರಿಗಳು: ದೇವಣಗೇರಿ. Devanageri

ಮೂಕೋಂಡ ಪಿ. ಶಶಿ ಸುಬ್ರಮಣಿ, ಸಹಕಾರಿಗಳು: ದೇವಣಗೇರಿ. Devanageri


ಮೂಕೋಂಡ ಪಿ. ಶಶಿ ಸುಬ್ರಮಣಿಯವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಶಶಿ ಸುಬ್ರಮಣಿಯವರ ತಂದೆ ದಿವಂಗತ ಪೂವಯ್ಯನವರು ತಮ್ಮ ಪ್ರಾಧ್ಯಾಪಕ ವೃತ್ತಿಯಿಂದ ನಿವೃತರಾದ ನಂತರ ದೇವಣಗೇರಿ ವಿವಿದೋದ್ದೇಶ ಸಹಕಾರ ಧವಸ ಭಂಡಾರದ ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಂದೆಯವರ ಸಹಕಾರ ಕ್ಷೇತ್ರದಲ್ಲಿನ ಉತ್ತಮ ಸೇವೆಯನ್ನು ಮನಗಂಡು ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಮೂಕೋಂಡ ಪಿ. ಶಶಿ ಸುಬ್ರಮಣಿಯವರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು.

2013ರಲ್ಲಿ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ ಶಶಿ ಸುಬ್ರಮಣಿಯವರು, ಮೊದಲ ಚುನಾವಣೆಯಲ್ಲೆ ಆಯ್ಕೆಗೊಂಡು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ನಂತರ 2018ರ ಸಂಘದ ಚುನಾವಣೆಯಲ್ಲಿ ಅವಿರೋದವಾಗಿ ಆಯ್ಕೆಗೊಂಡು ಮುಂದಿನ ಅವಧಿಯವರಗೆ ಪ್ರಸ್ತುತ ಆಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1999ರಲ್ಲಿ ದೇವಣಗೇರಿ ವಿವಿದೋದ್ದೇಶ ಸಹಕಾರ ಧವಸ ಭಂಡಾರದ ಸದಸ್ಯತ್ವ ಪಡೆದ ಶಶಿ ಸುಬ್ರಮಣಿಯವರು, 2003ರಲ್ಲಿ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದು ಸರಿ ಸುಮಾರು 21 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20ರಲ್ಲಿ 23.50 ಲಕ್ಷ ರೂಪಾಯಿಗಳಷ್ಟು ಲಾಭ ಪಡೆದಿದ್ದು, 2020-21 ರಲ್ಲಿ 34.50ಲಕ್ಷ ಲಾಭ ಪಡೆದಿದೆ ಎಂದು ಶಶಿ ಸುಬ್ರಮಣಿಯವರು ತಿಳಿಸಿದರು. ನಾನು 2013ರಲ್ಲಿ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ 5 ಲಕ್ಷದ ಒಳಗೆ ಲಾಭದಲ್ಲಿದ್ದ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಂತರದ ವರ್ಷಗಳಲ್ಲಿ 9ಲಕ್ಷ,  ಹೀಗೆ ಹಂತ ಹಂತವಾಗಿ ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಹೊಂದಿ ಲಾಭದಲ್ಲಿ ನಡೆಯುತ್ತಿದೆ ಎಂದು ಶಶಿ ಸುಬ್ರಮಣಿ ತಿಳಿಸಿದರು.

ಉತ್ತಮ ಸೇವೆಯೊಂದಿಗೆ ಸಂಘದ ಸದಸ್ಯರಿಗೆ ನೀಡಲಾದ ಸಾಲಗಳ ಶೇಕಡ 100%ರಷ್ಟು ಸಕಾಲ ಮರುಪಾವತಿಯಿಂದ ಸಂಘವು ಲಾಭವನ್ನು ಹೊಂದಿದೆ ಎಂದ ಶಶಿ ಸುಬ್ರಮಣಿಯವರು, ಬಳಕೆ ಸಾಲಗಳಾದ U.P.S. ಹಾಗೂ Solar ಅಳವಡಿಸಲು ಸದಸ್ಯರಿಗೆ ನೀಡಿದ ಸಾಲ, ವಾಹನ ಸಾಲ, ಗೊಬ್ಬರ ಸಾಲ, ಪಿಗ್ಮಿ ಸಾಲ, ಜಾಮೀನು ಸಾಲ ಹಾಗೂ ಕೃಷಿ ಸಾಲಗಳಿಂದ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ ಎಂದರು. ಹಾಗೆ ಸಂಘದಿಂದ ಗೊಬ್ಬರ ಮಾರಾಟವು ವರ್ಷಕ್ಕೆ 1ಕೋಟಿಗೂ ಮಿಗಿಲಾಗಿ ವಹಿವಾಟು ಆಗುತ್ತಿದ್ದು, ಸಂಘದ ಸಭಾಂಗಣವನ್ನು ಬಾಡಿಗೆ ರೂಪದಲ್ಲಿ ನೀಡುತ್ತಿರುವುದರಿಂದ ಬರುವ ಆದಾಯ, ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ನ್ಯಾಯ ಬೆಲೆ ಅಂಗಡಿಯಿಂದ ದೊರಕುತ್ತಿರುವ ಆದಾಯ ಮುಂತಾದ ಮೂಲಗಳಿಂದಲೂ ಸಂಘವು ಆದಾಯವನ್ನು ಪಡೆದು ಲಾಭಗಳಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಶಶಿ ಸುಬ್ರಮಣಿ ತಿಳಿಸಿದರು.

ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ SSLC, PUC, ಪದವಿ ಹಾಗೂ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿದವರನ್ನು ಪ್ರೋತ್ಸಾಹ ಧನ ನೀಡಿ ಸನ್ಮಾನಿಸುವ ಕಾರ್ಯವನ್ನು ನನ್ನ ಅಧಿಕಾರವಧಿಯಲ್ಲಿ ಪ್ರಾರಂಭಿಸಲಾಯಿತು ಎಂದ ಶಶಿ ಸುಬ್ರಮಣಿಯವರು, ಹಾಗೆ ಸಂಘಕ್ಕಾಗಿ ದುಡಿದ ಹಿರಿಯರು ಹಾಗೂ ಪ್ರಗತಿಪರ ಕೃಷಿಕರನ್ನು ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಗುತ್ತಿದೆ ಎಂದರು. ಮಹಾಸಭೆಗೆ ಪ್ರತಿಯೊಬ್ಬ ಸದಸ್ಯರು ಭಾಗವಹಿಸಬೇಕು ಎಂಬ ನಿಟ್ಟಿನಲ್ಲಿ ಊಟದ ಭತ್ಯೆಯ ಬದಲು ಮಹಾಸಭೆಯ ನಂತರ ಸಂಘದ ಸಭಾಂಗಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ಮಹಾಸಭೆಯ ಪ್ರಾರಂಭದಿಂದ ಕೊನೆಯವರಗೆ ಖುದ್ದು ಹಾಜರಿರುವ ಸದಸ್ಯರಿಗೆ ಲಾಟರಿ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಶಶಿ ಸುಬ್ರಮಣಿ ತಿಳಿಸಿದರು.

ವೀರಾಜಪೇಟೆಯ ಸುತ್ತಮುತ್ತ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸರಿ ಸುಮಾರು 1.15 ಕೋಟಿ ಅಂದಾಜು ವೆಚ್ಚದಲ್ಲಿ ಸೂಕ್ತ ನೀವೇಶನವನ್ನು  ಖರೀದಿಸಿ ಅಲ್ಲಿ ರೈತ ಸಮುದಾಯ ಭವನ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯವು ಪ್ರಗತಿಯಲ್ಲಿದೆ ಎಂದ ಶಶಿ ಸುಬ್ರಮಣಿ, ಸಂಘದ ಸದಸ್ಯರಿಗೆ ಮನೆಕಟ್ಟಲು ಹಾಗೂ ದುರಸ್ಥಿ ಮಾಡಲು ಹೊಸದಾದ ಸಾಲಗಳನ್ನು ನೀಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಇದೆ ಎಂದು ತಿಳಿಸಿದರು.

ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶಶಿ ಸುಬ್ರಮಣಿಯವರ ಅಧಿಕಾರವಧಿಯಲ್ಲಿ ಕೊಡಗು ಡಿಸಿಸಿ ಬ್ಯಾಂಕಿನಿಂದ ಹಾಗೂ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನಿಂದ ಉತ್ತಮ ಕಾರ್ಯನಿರ್ವಹಣೆ ಹಾಗೂ ಶೇಕಡ 100%ರಷ್ಟು ಸಾಲ ವಸೂಲಾತಿಗೆ ಪ್ರಶಸ್ತಿ ದೊರಕಿದೆ. ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಶಶಿ ಸುಬ್ರಮಣಿಯವರ  ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಶಶಿ ಸುಬ್ರಮಣಿಯವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಮುಂದಿನ ಯುವಶಕ್ತಿಗೆ ಶಶಿ ಸುಬ್ರಮಣಿಯವರು ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಶಶಿ ಸುಬ್ರಮಣಿ ಚೆಂಬೆಬೆಳ್ಳಿಯೂರು ಗ್ರಾಮ ಪಂಚಾಯಿತಿಯಲ್ಲಿ 10 ವರ್ಷಗಳ ಕಾಲ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗೋಣಿಕೊಪ್ಪ ಎ.ಪಿ.ಎಂ.ಸಿ. ಉಪಾಧ್ಯಕ್ಷರಾಗಿ ಸದಸ್ಯರಾಗಿ ಸೇವೆ. ಶಶಿ ಸುಬ್ರಮಣಿಯವರು ಗೊಣಿಕೊಪ್ಪಲು ಎ.ಪಿ.ಎಂ.ಸಿ. ಉಪಾಧ್ಯಕ್ಷರಾಗಿದ್ದ ಸಂದರ್ಭ ಅಧ್ಯಕ್ಷರಾಗಿದ್ದ ಪಟ್ರಪಂಡ ರಘು ರವರೊಂದಿಗೆ ಕಾರ್ಯನಿರ್ವಹಿಸಿ ಅತೀ ಹೆಚ್ಚು ಸೆಸ್‌ ಸಂಗ್ರಹಿಸಿ ಇತರರಿಗೆ ಮಾರ್ಗದರ್ಶನವಾಗಿದ್ದಾರೆ. 2016ರಲ್ಲಿ ಕದನೂರು ಕ್ಷೇತ್ರದಿಂದ ಕೊಡಗು ಜಿಲ್ಲಾ ಪಂಚಾಯಿತಿಗೆ ಆಯ್ಕೆಗೊಂಡು 20 ತಿಂಗಳ ಕಾಲ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ದೇವಣಗೇರಿ ವಿವಿದೋದ್ದೇಶ ಸಹಕಾರ ಧವಸ ಭಂಡಾರದ ನಿರ್ದೇಶಕರಾಗಿದ್ದಾರೆ.  ಸಾಮಾಜಿಕವಾಗಿ ವೀರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಗಳ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ದೇವಣಗೇರಿ ಪ್ಲಾಂಟರ್ಸ್‌ ಕ್ಲಬ್‌ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕವಾಗಿ ದೇವಣಗೇರಿ ಹಿರಿಯ ಪ್ರಾಥಮಿಕ ಹಾಗೂ ಫ್ರೌಡಶಾಲೆಯ ಶಾಲಾಭಿವೃದ್ದಿ ಸಮಿತಿಯ ನಿರ್ದೆಶಕರಾಗಿದ್ದಾರೆ.

ಮೂಲತಃ ಕೃಷಿಕರಾಗಿರುವ ಮೂಕೋಂಡ ಪಿ. ಶಶಿ ಸುಬ್ರಮಣಿಯವರು ದಿವಂಗತ ಮೂಕೋಂಡ ಪೂವಯ್ಯ ಹಾಗೂ ದಿವಂಗತ ಕಾಮವ್ವ ದಂಪತಿಯ ಕಿರಿಯ ಮಗನಾಗಿದ್ದಾರೆ. ಪತ್ನಿ ದಿವಂಗತ ಪ್ರೀತ್.‌ ಹಿರಿಯಮಗ ಸಾಪ್ಟ್‌ವೇರ್ ಇಂಜಿನಿಯರ್ ಆದ ಸೋಮಣ್ಣ‌, ಸೊಸೆ ಕೋಮಿನಿ  ಹಾಗೂ ಮೊಮ್ಮಗ ರಾಘ್‌ ಪೂವಯ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ಸಚಿನ್‌ ಮುತ್ತಣ್ಣ ಆರ್ಕಿಟೆಕ್‌ಟ್‌ ಆಗಿ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಮೂಕೋಂಡ ಪಿ. ಶಶಿ ಸುಬ್ರಮಣಿಯವರು ಚೆಂಬೆಬೆಳ್ಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಟೆಕೊಪ್ಪ ಗ್ರಾಮದಲ್ಲಿ ಪ್ರಸ್ತುತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 02-08-2021


Search Coorg Media

Coorg's Largest Online Media Network 

Previous Post Next Post