ಪಟ್ಟಡ ಮನು ರಾಮಚಂದ್ರ, ಸಹಕಾರಿಗಳು: ಬೇಟೋಳಿ. Betoli
ಪಟ್ಟಡ ಮನು ರಾಮಚಂದ್ರರವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ಜನಸೇವೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ದೃಷ್ಠಿಕೋನದಿಂದ ಸಹಕಾರ ಕ್ಷೇತ್ರಕ್ಕೆ ಧುಮುಕಿದ ಪಟ್ಟಡ ಮನು ರಾಮಚಂದ್ರರವರು, 1999 ರಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಬಾರಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2004ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ 2008ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಅಧ್ಯಕ್ಷರಾದರು. ಅಲ್ಲಿಂದ ಮುಂದಿನ ಅವಧಿಯಲ್ಲಿ ಸಂಘದ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1986ರಲ್ಲಿ ಬೇಟೋಳಿ ವಿವಿದೋದ್ದೇಶ ಸಹಕಾರ ಧವಸ ಭಂಡಾರದಲ್ಲಿ ಸದಸ್ಯತ್ವವನ್ನು ಪಡೆದ ಮನು ರಾಮಚಂದ್ರರವರು, 1996ರಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದು ಸರಿ ಸುಮಾರು 35 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2017-18ರಲ್ಲಿ 13ಲಕ್ಷ ಲಾಭ, 2018-19ರಲ್ಲಿ 11.5ಲಕ್ಷ ಲಾಭ ಹಾಗೂ 2019-20ರಲ್ಲಿ 13 ಲಕ್ಷ ಲಾಭ ಪಡೆದಿದೆ ಎಂದ ಮನು ರಾಮಚಂದ್ರರವರು, ಸದಸ್ಯರಿಗೆ ನೀಡಿದ ಸಾಲಗಳ ಶೇಕಡ 100ರಷ್ಟು ಸಕಾಲ ಮರುಪಾವತಿ ಪ್ರಮುಖ ಕಾರಣ ಎಂದರು. ಹಾಗೆ ಜಾಮೀನು ಸಾಲ, ಕೃಷಿ ಸಾಲ, ಗೊಬ್ಬರ ಸಾಲ, ಪಿಗ್ಮಿ ಸಾಲ, ಬಳಕೆ ಸಾಲ, ಗೊಬ್ಬರ ಮಾರಾಟ ಹಾಗೂ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಿರುವುದರಿಂದ ದೊರಕುತ್ತಿರುವ ಆದಾಯದಿಂದ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ಮನು ರಾಮಚಂದ್ರರವರು ತಿಳಿಸಿದರು.
2007ರಲ್ಲಿ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೊಬ್ಬರ ದಾಸ್ತಾನು ಗೋದಾಮು ಹಾಗೂ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದ ಮನು ರಾಮಚದ್ರರವರು, 2017ರಲ್ಲಿ 73ಲಕ್ಷ ವೆಚ್ಚದಲ್ಲಿ ಸಂಘದ ನೂತನ ಆಡಳಿತ ಕಛೇರಿ, ಗೋದಾಮು ಹಾಗೂ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ ಎಂದರು. ತಮ್ಮ ಅಧಿಕಾರವಧಿಯಲ್ಲಿ ಜಾಮೀನು ಸಾಲದ ಪರಿಮಿತಿಯನ್ನು ಹೆಚ್ಚಿಸಲಾಗಿದ್ದು, ಅದೇ ರೀತಿ ಗೊಬ್ಬರ ಸಾಲವನ್ನು ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದರು. ಸಂಘದ ನೂತನ ಕಟ್ಟಡಕ್ಕಾಗಿ ಮಾಡಿದ 74 ಲಕ್ಷ ಸಾಲದಲ್ಲಿ ಬಹುಪಾಲು ಮರುಪಾವತಿ ಮಾಡಿ ಬಾಕಿ 12ಲಕ್ಷದಷ್ಟು ಮಾತ್ರ ಮರುಪಾತಿಸಲು ಇದೆ ಎಂದು ಈ ಸಂದರ್ಭದಲ್ಲಿ ಮನು ರಾಮಚಂದ್ರ ತಿಳಿಸಿದರು.
ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಟ್ಟಡ ಮನು ರಾಮಚಂದ್ರರವರ ಅಧಿಕಾರವಧಿಯಲ್ಲಿ ಕೊಡಗು ಡಿಸಿಸಿ ಬ್ಯಾಂಕಿನಿಂದ ಹಾಗೂ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನಿಂದ ಉತ್ತಮ ಕಾರ್ಯನಿರ್ವಹಣೆಗೆ ಸತತ ಐದು ಬಾರಿ ಪ್ರಶಸ್ತಿ ದೊರಕಿದೆ. ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಮನು ರಾಮಚಂದ್ರರವರು ತಿಳಿಸಿದರು.
ಸಂಘದ ಸದಸ್ಯರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಸುಲಭವಾಗಿ ಸಾಲ ನೀಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯಿದೆ ಎಂದ ಮನು ರಾಮಚಂದ್ರರವರು, ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಪ್ರಗತಿಯತ್ತ ಸಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಪೂರ್ಣ ಮಟ್ಟದಲ್ಲಿ ಇರಬಾರದು ಎಂದ ಪಟ್ಟಡ ಮನು ರಾಮಚಂದ್ರರವರವರು, ಸರ್ಕಾರವು ಸಹಕಾರ ಸಂಘಗಳ ಮೇಲೆ ಸ್ವಲ್ಪ ಮಟ್ಟಿನಲ್ಲಿ ನಿಗಾ ವಹಿಸಿದರೆ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ತಮ್ಮ ಸಲಹೆಗಳನ್ನು ತಿಳಿಸಿದರು.
ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಮುಂದಿನ ಯುವಶಕ್ತಿಗೆ ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.
ಸಹಕಾರ ಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಮಾರ್ಕೆಟಿಂಗ್ ಫೆಡರೇಷನ್‌ನಲ್ಲಿ 10 ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ. ವೀರಾಜಪೇಟೆ ಎ.ಪಿ.ಸಿ.ಎಂ.ಎಸ್.ನಲ್ಲಿ10 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ 5 ವರ್ಷಗಳ ಕಾಲ ತಟಸ್ಥವಾಗಿದ್ದು, ಇದೀಗ ಮರಳಿ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ವೀರಾಜಪೇಟೆ ಸಹಕಾರ ಯೂನಿಯನ್‌ನಲ್ಲಿ 10ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ. ಕೊಡಗು ಸಹಕಾರ ಯೂನಿಯನ್‌ನಲ್ಲಿ ಎರಡು ಅವಧಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಟೋಳಿ ವಿವಿದೋದ್ದೇಶ ಸಹಕಾರ ಧವಸ ಭಂಡಾರದಲ್ಲಿ 1997ರಿಂದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಪಟ್ಟಡ ಮನು ರಾಮಚಂದ್ರರವರು 1992 ರಿಂದ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಕೊಡಗು ಜಿಲ್ಲಾ ಯುವಮೋರ್ಚಾ ಸದಸ್ಯರಾಗಿ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ವೀರಾಜಪೇಟೆ ಕೊಡವ ಸಮಾಜದ ನಿರ್ದೇಶಕರಾಗಿ 9 ವರ್ಷಗಳಿಂದ ಸೇವೆ. ವೀರಾಜಪೇಟೆ ಕೃಷಿಕ ಸಮಾಜದಲ್ಲಿ 5 ವರ್ಷದಿಂದ ಉಪಾಧ್ಯಕ್ಷರಾಗಿ ಸೇವೆ ಹಾಗೆ ಪ್ರಸ್ತುತ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಟೋಳಿ ಮಹದೇವಾ ದೇವಾಲಯ ಸಮಿತಿಯ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಕೃಷಿಕರಾಗಿರುವ ಪಟ್ಟಡ ಮನು ರಾಮಚಂದ್ರರವರು, ದಿವಂಗತ ಪಟ್ಟಡ ಚೀಯಣ್ಣ ಹಾಗೂ ಕಾಮವ್ವ ದಂಪತಿಯ ಹಿರಿಯ ಮಗನಾಗಿದ್ದಾರೆ. ಪತ್ನಿ ದಿವ್ಯಾ ಗೃಹಿಣಿಯಾಗಿದ್ದಾರೆ. ಮಗ ಜೀವನ್ ಬೋಪಣ್ಣ ಪದವಿ ವ್ಯಾಸಂಗ ನಿರತರಾಗಿದ್ದಾರೆ. ಪಟ್ಟಡ ಮನು ರಾಮಚಂದ್ರರವರು ಪ್ರಸ್ತುತ ಕುಟುಂಬ ಸಮೇತ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಟೋಳಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 05-08-2021
Search Coorg Media
Coorg's Largest Online Media Network