ಬಿದ್ದಾಟಂಡ ಎ. ರಮೇಶ್‌ ಚಂಗಪ್ಪ, ಸಹಕಾರಿಗಳು: ನಾಪೋಕ್ಲು. Napoklu

ಬಿದ್ದಾಟಂಡ ಎ. ರಮೇಶ್‌ ಚಂಗಪ್ಪ, ಸಹಕಾರಿಗಳು: ನಾಪೋಕ್ಲು. Napoklu

ಕೊಡಗು ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತ,  ಅಂದರೆ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು 2002 ರಿಂದ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 


“ಸರ್ಚ್‌ ಕೂರ್ಗ್‌ ಮೀಡಿಯಾ” ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು ನನ್ನ ತಂದೆಯವರಾದ ದಿವಂಗತ ಬಿದ್ದಾಟಂಡ ಅಯ್ಯಪ್ಪನವರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನನ್ನ ಅಜ್ಜನವರಾದ ದಿವಂಗತ ಬಿದ್ದಾಟಂಡ ಚಂಗಪ್ಪನವರು ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದವರು. ಅವರು ಕೊಳಕೇರಿ ಧವಸ ಭಂಡಾರದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೆ ಅಜ್ಜನವರ ಅಣ್ಣ ದಿವಂಗತ ಮಾದಪ್ಪನವರ ಸಹಕಾರದೊಂದಿಗೆ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಸಹಕಾರ ಕ್ಷೇತ್ರದೊಂದಿಗೆ ಒಡನಾಟ ನಮ್ಮ ಕುಟುಂಬದಲ್ಲಿ ರಕ್ತಗತವಾಗಿ ಬಂದಿದೆ ಎಂದರು.


1999ರಲ್ಲಿ ಕೊಡಗು ಹಾಪ್‌ಕಾಮ್ಸ್ ಸದಸ್ಯತ್ವನ್ನು ಪಡೆದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು 2000ನೇ ಇಸವಿಯಲ್ಲಿ ಕೊಡಗು ಹಾಪ್‌ಕಾಮ್ಸ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಗೊಳ್ಳುತ್ತಾರೆ. ನಂತರ 2002ರಲ್ಲಿ ಕೊಡಗು ಹಾಪ್‌ಕಾಮ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.  ಅಲ್ಲಿಂದ ಸತತವಾಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


1965ರಲ್ಲಿ ಆರಂಭಗೊಂಡ ಕೊಡಗು ಹಾಪ್‌ಕಾಮ್ಸ್ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು ತದ ನಂತರ ಕೆಲವು ದಶಕಗಳಲ್ಲಿ ಮಂದಗತಿಯಲ್ಲಿ ಸಾಗುತ್ತಾ ಬಂತು 2002ರಲ್ಲಿ ರಮೇಶ್‌ ಚಂಗಪ್ಪನವರು ಕೊಡಗು ಹಾಪ್‌ಕಾಮ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ  ನಂತರ ಪ್ರಗತಿಯತ್ತ ಕೊಂಡೊಯ್ಯೊಲು ಬಹಳಷ್ಟು ಶ್ರಮವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಮೇಶ್‌ ಚಂಗಪ್ಪನವರು, ಹಾಪ್‌ಕಾಮ್ಸ್ ಕಟ್ಟಡ ನಿರ್ಮಾಣವೂ 20 ವರ್ಷದ ಕನಸಾಗಿತ್ತು, ಬಹಳಷ್ಟು ಶ್ರಮವಹಿಸಿ ಕಟ್ಟಡ ನಿರ್ಮಾಣ ಮಾಡಲಾಯಿತು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಜಿ. ಬೋಪ್ಪಯ್ಯನವರ ಸಹಕಾರದಿಂದ ಮಡಿಕೇರಿಯ ಹೆಡ್‌ ಪೋಸ್ಟ್‌ ಆಫೀಸ್‌ನ ಎದುರು ಸುಮಾರು 37 ಸೆಂಟ್‌ ಜಾಗವನ್ನು ಗುರುತಿಸಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಿಂದ 1.41 ಕೋಟಿ ಅನುದಾನವನ್ನು ಪಡೆದು, ಹಾಗೆ 20ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ತಡೆಗೋಡೆಯನ್ನು ನಿರ್ಮಿಸಿ ಒಟ್ಟು 1.70 ಕೋಟಿ ವೆಚ್ಚದಲ್ಲಿ ಒಂದು ಸುಸಜ್ಜಿತ ಕೊಡಗು ಹಾಪ್‌ಕಾಮ್ಸ್‌ ಕಟ್ಟಡವನ್ನು ನಿರ್ಮಿಸಲಾಯಿತು 2021ರ ಅಕ್ಟೋಬರ್‌ 16ರಂದು ಇದರ ಉದ್ಘಾಟನೆ ನೆರವೇರಿತು ಎಲ್ಲರಿಗೂ ಇದರ ಉತ್ತಮ ಸೇವೆ ತಲುಪುವಂತಾಗಲಿ ಎಂದು ಹೇಳಿದರು.


ಕೊಡಗು ಹಾಪ್‌ಕಾಮ್ಸ್‌ 2021-22ರ ಸಾಲಿನಲ್ಲಿ ರೂಪಾಯಿ 27,64,155.00 ಲಕ್ಷ ವ್ಯಾಪಾರ ಲಾಭವನ್ನು ಪಡೆಯಿತು. 2022-23ರ ಸಾಲಿನಲ್ಲಿ ರೂಪಾಯಿ 41,96,707.00 ಲಕ್ಷ ವ್ಯಾಪರ ಲಾಭವನ್ನು ಪಡೆದಿದೆ ಎಂದ ರಮೇಶ್‌ ಚಂಗಪ್ಪನವರು ಸೋಮವಾರಪೇಟೆ ಪಟ್ಟಣದಲ್ಲಿ 5 ಸೆಂಟ್‌ ಜಾಗ ಮಂಜೂರಾಗಿದ್ದು ಅಲ್ಲಿ ಇಲ್ಲಿಯವರಗೆ ಖಾಸಗಿ ಜಾಗದಲ್ಲಿ ಕಾರ್ಯಾಚರಿಸುತ್ತಿದ್ದ ಹಾಪ್‌ಕಾಮ್ಸ್ ಮಳಿಗೆಯನ್ನು‌ ಸ್ವಂತ ಜಾಗದಲ್ಲಿ ಕಾರ್ಯಾಚರಿಸಿ ಅದರೊಂದಿಗೆ ರೈತ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇವೆ ಎಂದರು. ಹಾಗೆ ಕೊಡಗು ಜಿಲ್ಲಾದ್ಯಂತ ಪಟ್ಟಣ ವ್ಯಾಪ್ತಿಗಳಲ್ಲಿ ಜಾಗ ಲಭ್ಯವಿದ್ದರೆ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು. ಮಡಿಕೇರಿಯ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಜ್ಯೂಸ್‌ ಹಾಗೂ ಕಾಫಿ ಕೆಫೆಯನ್ನು ಪ್ರಾರಂಭಿಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. 

 

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಮಾವು ಮತ್ತು ಹಲಸು ಮೇಳ 2023 ಆಯೋಜನೆ ಮಾಡಲಾಗಿತ್ತು. ಮೇ 26 ರಿಂದ 28 ರವರೆಗೆ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ನಡೆದ 'ಮಾವು ಮತ್ತು ಹಲಸು ಮೇಳ 2023' ಯಶಸ್ವಿಯಾಗಿದೆ. ಒಟ್ಟು 20 ಮಳಿಗೆಗಳಲ್ಲಿ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಮೇಳದಲ್ಲಿ 21 ರಿಂದ 22 ಲಕ್ಷ ರೂ. ವಹಿವಾಟು ನಡೆದಿದೆ ಎಂದ ರಮೇಶ್‌ ಚಂಗಪ್ಪನವರು, ರೈತರಿಂದ ರೈತರಿಗಾಗಿ ಇರುವ ಹಾಪ್ ಕಾಮ್ಸ್ ಸದಾ ನಾಡಿನ ರೈತರ ಪರವಾಗಿ ಕೆಲಸ ಮಾಡ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ನೇರವಾಗಿ ರೈತರಿಂದಲೇ ತರಕಾರಿ, ಹಣ್ಣುಹಂಪಲನ್ನು ಖರೀದಿಸಿ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ದೃಷ್ಟಿಯನ್ನು ಹಾಪ್ ಕಾಮ್ಸ್ ಹೊಂದಿದೆ.‌ ಪ್ರತಿನಿತ್ಯ ವಹಿವಾಟು ನಡೆಸುವ ಹಾಪ್ ಕಾಮ್ಸ್, ರೈತರು ಹಾಗು ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಅತ್ತ ರೈತರಿಗೂ ಉತ್ತಮ ಬೆಲೆ ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ. ಅಲ್ಲದೇ ಪ್ರತೀ ನಿತ್ಯವೂ ತರಕಾರಿ ಹಾಗೂ ಹಣ್ಣುಗಳ ಬೆಲೆಯನ್ನು ನಿಗದಿ ಪಡಿಸಿ ವಹಿವಾಟು ನಡೆಸಲಾಗುತ್ತಿದೆ ಎಂದರು.


ಕೊಡಗು ಹಾಪ್‌ಕಾಮ್ಸ್‌  ರಾಜ್ಯದಲ್ಲೇ ಮಾದರಿ ಹಾಪ್‌ಕಾಮ್ಸ್‌ ಎಂದು ಮನ್ನಣೆಗಳಿಸಿದ್ದು, ಕೊಡಗು ಹಾಪ್‌ಕಾಮ್ಸ್‌ನ ಈ ಎಲ್ಲಾ ಪ್ರಗತಿಪರ ಬೆಳವಣಿಗೆಗೆ ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರು ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಶ್ರೀ ಚಕ್ಕೇರ ಪ್ರಮೋದ್‌ ಹಾಗೂ ಸಿಬ್ಬಂದಿ ವರ್ಗದ ಸಹಕಾರ ಅಪಾರ ಪ್ರಮಾಣದಲ್ಲಿ ದೊರಕಿದೆ ಎಂದು ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು ಸಂತಸ ವ್ಯಕ್ತಪಡಿಸಿದ್ದರು. 


ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಬಹುಮತದ ಬದಲು ಸರ್ವಾನುಮತ ಸಹಕಾರ ಕ್ಷೇತ್ರದಲ್ಲಿ ಇರಬೇಕು  ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು  ವ್ಯಕ್ತಪಡಿಸಿದ್ದರು. 


ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ರಾಜಕೀಯ ರಹಿತವಾಗಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.


ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು ಸಹಕಾರಿ ಕ್ಷೇತ್ರದಲ್ಲಿ 2002ರಿಂದ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾ ಮಂಡಲದ ನಿರ್ದೇಶಕರಾಗಿ ಪ್ರಸ್ತುತ ಸೇವೆಯಲ್ಲಿದ್ದಾರೆ .2005 ರಿಂದ 2010 ರವರಗೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ. 2005 ರಿಂದ 2010 ರವರಗೆ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ. .2010ರಿಂದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರಾಗಿ ಪ್ರಸ್ತುತ ಸೇವೆಯಲ್ಲಿದ್ದಾರೆ .2021 ರಿಂದ ಮಂಡ್ಯ ಜಿಲ್ಲಾ ಹಾಪ್‌ಕಾಮ್ಸ್‌ನ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾ ಮಂಡಲದಿಂದ ಪ್ರತಿನಿಧಿಯಾಗಿ ಪ್ರಸ್ತುತ ಸೇವೆಯಲ್ಲಿದ್ದಾರೆ.


1984ರಲ್ಲಿ ಮಂಡಲ ಪಂಚಾಯಿತಿ ಚುನಾವಣೆಯ ಮೂಲಕ ರಾಜಕೀಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು 1989ರಲ್ಲಿ ನಾಪೋಕ್ಲು ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷರಾದರು. 1991ರಲ್ಲಿ ಬಿ.ಜೆ.ಪಿ. ಮಡಿಕೇರಿ ತಾಲ್ಲೂಕು ಉಪಾಧ್ಯಕ್ಷರಾಗಿ, 1995ರಿಂದ 1999ರವರಗೆ ಮಡಿಕೇರಿ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲಿಂದ 2008ರಿಂದ 2011ರವರಗೆ ಬಿ.ಜೆ.ಪಿ. ಕೃಷಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ, 2011ರಿಂದ 2016ರವರಗೆ ಬಿ.ಜೆ.ಪಿ. ಜಿಲ್ಲಾ ಖಜಾಂಚಿಯಾಗಿ 2016ರಿಂದ 2019ರವರಗೆ ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.


ಸಾಮಾಜಿಕ ಕ್ಷೇತ್ರದಲ್ಲಿ 2000ರಿಂದ 2008ರವರಗೆ ವಿಶ್ವ ಹಿಂದು ಪರಿಷತ್‌ ಕೊಡಗು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ. ಪ್ರಾಣಿ ಹಿಂಸಾ ಪ್ರತಿಭಂದಕ ಸಂಘ(SPCA) ಜಿಲ್ಲಾಧ್ಯಕ್ಷರಾಗಿ ಸೇವೆ. ನಾಪೋಕ್ಲು ಉಮಾಮಹೇಶ್ವರಿ ಯುವ ಸಂಘದ ಸ್ಥಾಪಕರಾಗಿ ಸೇವೆ. 1997 ರಿಂದ 2000 ರವರಗೆ ನಾಪೋಕ್ಲು ಕೊಡವ ಸಮಾಜದ ನಿರ್ದೇಶಕರಾಗಿ.2000ರಿಂದ 2016ರವರಗೆ ಉಪಾಧ್ಯಕ್ಷರಾಗಿ 2016 ರಿಂದ 2019 ರವರಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಹರದಾಸ ಅಪ್ಪಚ್ಚ ಕವಿಯ 150ನೇ ಜನ್ಮದಿನ ಆಚರಣೆ ಹಾಗೂ ಅಪ್ಪಚ್ಚ ಕವಿ ನೆನೆಪಿಗಾಗಿ ಹೊರಾಂಗಣ ಸಭಾಂಗಣ ನಿರ್ಮಾಣ ಮಾಡಿದ್ದಾರೆ ಹಾಗೆ ಸಾರ್ವಜನಿಕರು ನೀಡಿದ ಧನ ಸಹಾಯದಲ್ಲಿ ಉಳಿಕೆಯಾದ 1 ಲಕ್ಷ ಹಣವನ್ನು ಅಪ್ಪಚ್ಚ ಕವಿ ಹೆಸರಿನಲ್ಲಿ ಯುವ ಜನಾಂಗದ ವಿದ್ಯಾರ್ಜನೆಗಾಗಿ ಶಾಶ್ವತ ದತ್ತಿ ನಿಧಿ ಸ್ಥಾಪನೆ ಮಾಡುವಲ್ಲಿ ಶ್ರಮ ವಹಿಸಿದ್ದಾರೆ. ನಾಪೋಕ್ಲು ಕೊಡವ ಸಮಾಜ ಸ್ಪೋರ್ಟ್ಸ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷರಾಗಿ ಸೇವೆ. ನಾಪೋಕ್ಲು ಕೊಡವ ಸಮಾಜ ಸೌಹಾರ್ದ ಸಹಕಾರ ಸಂಘದ ಸ್ಥಾಪಕ ನಿರ್ದೇಶಕರಾಗಿ ಸೇವೆ. 2016 ರಿಂದ 2019 ರವರಗೆ ಕೊಡವ ಸಮಾಜ ಫೇಡರೇಶನ್‌ ಬಾಳುಗೋಡು ಇದರ ನಿರ್ದೇಶಕರಾಗಿ ಸೇವೆ. 2017 ರಲ್ಲಿ ನಡೆದ ಬಿದ್ದಾಟಂಡ ಕಪ್ 21ನೇ ಕೊಡವ ಹಾಕಿ ಹಬ್ಬ ಇದರ ಅಧ್ಯಕ್ಷರಾಗಿ ಸೇವೆ. ನಾಪೋಕ್ಲುವಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆದ ಕೊಡವ ಮೇಳದ ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿ‌ ಕಾರ್ಯನಿರ್ವಹಣೆಗೆ ಮನಗಂಡು ಬೆಂಗಳೂರಿನಲ್ಲಿ ನಡೆದ ರಾಜ್ಯ ಕೊಡವ ಸಮ್ಮೇಳನದ ಮೆರವಣಿಗೆ ಸಮಿತಿಯ ಅಧ್ಯಕ್ಷರಾದ ಬೆಂಗಳೂರು ಕೊಡವ ಸಮಾಜದ ಚೆಪ್ಪುಡಿರ ತಿಲಕ್‌ರವರೊಂದಿಗೆ ಮೆರವಣಿಗೆ ಸಮಿತಿಯಲ್ಲಿ ಜಂಟಿ ಸಹಭಾಗಿತ್ವವನ್ನು ವಹಿಸಿದ್ದರು. 


ಧಾರ್ಮಿಕ ಕ್ಷೇತ್ರದಲ್ಲಿ ಈಸ್ಟ್ ಕೊಳಕೇರಿ ಉಮಾಮಹೇಶ್ವರಿ ದೇವಾಲಯ ಸಮಿತಿ ಸದಸ್ಯರಾಗಿ ಸೇವೆ  ಹಾಗೆ ಮಹಾದೇವ ದೇವಾಲಯದ ಸಮಿತಿ ಸದಸ್ಯರಾಗಿ ಸೇವೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.


ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರ ತಂದೆ: ದಿವಂಗತ ಬಿದ್ದಾಟಂಡ ಸಿ. ಅಯ್ಯಪ್ಪ, ತಾಯಿ: ಅಕ್ಕಮ್ಮ(ತಾಮನೆ ಚೆಪ್ಪುಡಿರ), ಪತ್ನಿ: ಜಮುನಾ(ತಾಮನೆ ಬಿದ್ದಂಡ) ಗೃಹಿಣಿ ಯಾಗಿದ್ದಾರೆ. ಹಿರಿಯ ಮಗಳು: ಕೃತಿಕಾ ಬೊಳ್ಳಮ್ಮ ಎಂ.ಎ. ಮೀಡಿಯಾ ಅಂಡ್‌ ಕಮ್ಯೂನಿಕೇಷನ್‌ ಪದವೀಧರರಾಗಿದ್ದು ಓನ್‌ ಫ್ಲಸ್‌ ಮೊಬೈಲ್‌ ಕಂಪೆನಿಯ ಪಿ.ಆರ್.‌ ಆಗಿ ಉದ್ಯೋಗದಲ್ಲಿದ್ದಾರೆ. ಮಗ: ವಿಘನೇಶ್‌ ಅಯ್ಯಪ್ಪ ಮರ್ಚೆಂಟ್‌ ನೇವಿಯಲ್ಲಿ ಇಂಜಿನಿಯರ್‌ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಇಬ್ಬರು ಹಿರಿಯ ಸಹೋದರರು: ಬಿದ್ದಾಟಂಡ ಮುತ್ತಣ್ಣ(ಡಿ.ಸಿ.ಪಿ. ನಿವೃತ್ತ) ಹಾಗೂ ಸೆಕೆಂಡ್‌ ಲೆಪ್ಟಿನೆಂಟ್ ದಿವಂಗತ ಬಿದ್ದಾಟಂಡ ಸುರೇಶ್‌ ರವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.


ಮೂಲತಃ ಕೃಷಿಕರಾಗಿರುವ ಬಿದ್ದಾಟಂಡ ಎ.ರಮೇಶ್ ಚಂಗಪ್ಪನವರು ಪ್ರಸ್ತುತ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈಸ್ಟ್ ಕೊಳಕೇರಿ‌ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 15-07-2023

Search Coorg Media

Coorg's Largest Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

Post a Comment

Previous Post Next Post