ಕಲಿಯಾಟಂಡ ಎ. ತಮ್ಮಯ್ಯ(ರಘು), ಸಹಕಾರಿಗಳು: ಕಕ್ಕಬೆ. Kakkabe

 

ಕಲಿಯಾಟಂಡ ಎ. ತಮ್ಮಯ್ಯ(ರಘು), ಸಹಕಾರಿಗಳು: ಕಕ್ಕಬೆ. Kakkabe

ಕಲಿಯಾಟಂಡ ಎ. ತಮ್ಮಯ್ಯ(ರಘು)ರವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

1981ರಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಲಿಯಾಟಂಡ ಎ. ತಮ್ಮಯ್ಯ(ರಘು)ರವರು ಸಹಕಾರ ಕ್ಷೇತ್ರಕ್ಕೆ ಪೂರ್ಣ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಾರೆ. 2003 ರಲ್ಲಿ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಮೊದಲ ಬಾರಿ ಸ್ಪರ್ಧಿಸಿ ಆಯ್ಕೆಗೊಂಡ ರಘು ತಮ್ಮಯ್ಯನವರು  ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ. 2008 ರ ಚುನಾವಣೆಯಲ್ಲಿ ಮರಳಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗುತ್ತಾರೆ. ಅಲ್ಲಿಂದ ಕೆಲವು ವೈಯುಕ್ತಿಕ ಕಾರಣಗಳಿಂದ  2008 ರಿಂದ 2010ರವರಗೆ ಸಂಘದ ಕಾರ್ಯ ಚಟುವಟಿಕೆಯಲ್ಲಿ ತಟಸ್ಥರಾಗಿ ಉಳಿದ ಇವರು, ನಂತರ 2010 ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು 2018 ರವರಗೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ. ಆ ಮೇಲೆ 2018ರ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿ ಅಯ್ಕೆಯಾದ ರಘು ತಮ್ಮಯ್ಯನವರು ಇದೀಗ ಪ್ರಸ್ತುತ ಮುಂದಿನ ಅವಧಿಯವರಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ 25ನೇ ವರ್ಷದದಲ್ಲಿ ಸಹಕಾರ ಕ್ಷೇತ್ರಕ್ಕೆ ಧುಮುಕಿದ ಇವರು ಸರಿ ಸುಮಾರು 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018-19ನೇ ಸಾಲಿನಲ್ಲಿ 13.28 ಲಕ್ಷ ರೂಪಾಯಿಗಳ ಲಾಭವನ್ನು ಪಡೆದಿದೆ ಎಂದ ರಘು ತಮ್ಮಯ್ಯನವರು,  2019-20ರಲ್ಲಿ 16.17 ಲಕ್ಷ ಲಾಭ, 2020-21ರ ಸಾಲಿನಲ್ಲಿ 20,68,495.82 ಲಕ್ಷ ಲಾಭ, 2021-22ರ ಸಾಲಿನಲ್ಲಿ 21,76,784.84 ಲಕ್ಷ ರೂಪಾಯಿಗಳಷ್ಷು ಲಾಭಗಳಿಸಿದೆ ಎಂದರು.

ಸಂಘವು ಲಾಭಗಳಿಸಲು ರೈತರು ಹಾಗೂ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಸಕಾಲದ ಮರು ಪಾವತಿ ಪ್ರಮುಖ ಕಾರಣ ಎಂದ ರಘು ತಮ್ಮಯ್ಯನವರು,  ಮಳೆಗಾಲದ ಅವಧಿಯಲ್ಲಿ ವರ್ಷಂಪ್ರತಿ ರೂಪಾಯಿ 40 ರಿಂದ 50 ಲಕ್ಷದಷ್ಟೂ ಗೊಬ್ಬರ ಮಾರಾಟವಾಗುತ್ತಿತ್ತು ಆದರೆ 2021ರಲ್ಲಿ ಇಲ್ಲಿಯವರಗೆ ರೂಪಾಯಿ 1 ಕೋಟಿಗೂ ಮಿಗಿಲಾಗಿ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ  ಗೊಬ್ಬರವು  ಮಾರಾಟವಾಗಿದೆ ಎಂದರು. ಹಾಗೆ ಸಂಘದಿಂದ ಕೃಷಿ ಪರಿಕರಗಳ ಮಾರಾಟ, ವ್ಯವಸಾಯ ಉತ್ಪಾದನೆಗಳನ್ನು ಹೆಚ್ಚಿಸಿಕೊಳ್ಳಲು ಅಲ್ಪಾವಧಿ ಸಾಲ, ಸ್ವಸಹಾಯ ಗುಂಪಿನ ಸಾಲ, ಜಾಮೀನು ಸಾಲ, ನಿರಖು ಠೇವಣಿ ಸಾಲ, ಗೊಬ್ಬರ ಸಾಲ ನೀಡುವುದು, ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸುವುದು, ಲಾಕರ್ ವ್ಯವಸ್ಥೆ ಒದಗಿಸುವುದು, ಸದಸ್ಯರಿಗೆ ವ್ಯವಸಾಯ ಸಾಮಗ್ರಿಗಳು ಎಂದರೆ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ ವ್ಯವಸಾಯೋಪಕರಣ ಕ್ರಿಮಿನಾಶಕ, ಇತ್ಯಾದಿ ವಸ್ತುಗಳನ್ನು ಪೂರೈಸುವುದು ಸದಸ್ಯರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದರಿಂದ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ಈ ಸಂದರ್ಭದಲ್ಲಿ ರಘು ತಮ್ಮಯ್ಯನವರು ತಿಳಿಸಿದರು.

ಸಂಘದ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವ ರಘುತಮ್ಮಯ್ಯನವರು, ಸಂಘಕ್ಕೆ ಹೊಸ ಗೋದಾಮು ಕಟ್ಟಡ ಕಟ್ಟುವಲ್ಲಿ ಶ್ರಮವಹಿಸಿರುತ್ತಾರೆ. ನೆಲಮಾಳಿಗೆಯಲ್ಲಿ 100 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೊಬ್ಬರ ಗೋದಾಮು ಅದರ ಮೊದಲ ಮಹಡಿಯಲ್ಲಿ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಛೇರಿ ಹಾಗೆ ಸಂಘದ ಹಿಂಬದಿ ನೆಲಮಾಳಿಗೆಯಲ್ಲಿ 200 ಮೇಟ್ರಿಕ್‌ ಟನ್‌ ಸಾಮರ್ಥ್ಯದ ಗೊಬ್ಬರ ಗೋದಾಮು ಹಾಗೂ ಮೊದಲ ಮಹಡಿಯಲ್ಲಿ ಸಭಾಂಗಣ ನಿರ್ಮಿಸಲು ತಮ್ಮ ಅಧಿಕಾರವಧಿಯಲ್ಲಿ ಇವರು  ಶ್ರಮವಹಿಸಿದ್ದಾರೆ. ಅದರೊಂದಿಗೆ ಸಂಘದ ಡಿಜಿಟಲೈಸೇಷನ್ ಹಾಗೂ ಸಂಘದಿಂದ ನೀಡಲ್ಪಡುತ್ತಿರುವ ಹಲವಾರು ಸಾಲಗಳನ್ನು ಅಭಿವೃದ್ಧಿಗೊಳಿಸಿದ್ದಾರೆ.

ಕಕ್ಕಬೆ ಫ್ಯಾಕ್ಸ್‌ ಕಟ್ಟಡದ ಹಿಂಭಾಗ ಹೊಳೆಯ ಹತ್ತಿರ 4 ಲಕ್ಷ ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿ, ಸಂಸದರ ನಿಧಿಯಿಂದ 3ಲಕ್ಷ ವೆಚ್ಚದ ತಡೆಗೋಡೆ ಹಾಗೂ ಇಂಟರ್‌ಲಾಕ್‌ ನಿರ್ಮಾಣದ ಕಾಮಗಾರಿ, 5ಲಕ್ಷ ವೆಚ್ಚದ ಕಕ್ಕಬೆ ಗ್ರಾಮದ ಮುಖ್ಯ ರಸ್ತೆಯಿಂದ ಕಕ್ಕಬೆ ಫ್ಯಾಕ್ಸ್‌ಗೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಸಂಘದ ಪಕ್ಕ ತಡೆಗೋಡೆೆ ನಿರ್ಮಿಸಲು ಸರಕಾರದ ಅನುದಾನವನ್ನು ತರಿಸಿಕೊಡುವಲ್ಲಿ ಸಫಲರಾಗಿರುವ ರಘು ತಮ್ಮಯ್ಯನವರು, ಈಗಾಗಲೆ 70ಲಕ್ಷ ವೆಚ್ಚದ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ವಿದಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ.ಜಿ. ಬೋಪ್ಪಯಯ್ಯನವರ ಸಹಕಾರವನ್ನು ಸ್ಮರಿಸಿದ ರಘುತಮ್ಮಯ್ಯನವರು, ಹಾಗೆ ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರಾದ ಬಾಂಡ್‌ ಗಣಪತಿಯವರು ಕೂಡ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.  ಸಂಘಕ್ಕೆ ನೂತನವಾಗಿ ಮೋದಿಕೇರ್ ಮಳಿಗೆ ಹಾಗೂ ಕ್ರಿಮಿನಾಶಕ ವಿಭಾಗದ ಮಳಿಗೆ ತಮ್ಮ ಅಧಿಕಾರ ಅವಧಿಯಲ್ಲಿ ಪ್ರಾರಂಭ ಮಾಡಿರುವ ಹೆಗ್ಗಳಿಕೆ ಇವರದಾಗಿರುತ್ತದೆ. 

ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಘು ತಮ್ಮಯ್ಯನವರ ಅಧಿಕಾರವಧಿಯಲ್ಲಿ ನಬಾರ್ಡ್‌ನಿಂದ ಹಾಗೂ ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಕಾರ್ಯನಿರ್ವಹಣೆಗೆ ಪ್ರಶಸ್ತಿ ದೊರಕಿದೆ. ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಇವರು ತಿಳಿಸಿದರು.

ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ನೋಂದಾವಣೆಗೊಂಡಿರುವ 20 ಸೆಂಟ್‌ ನಿವೇಶನದಲ್ಲಿ ಸಂಘಕ್ಕೆ ಆಧಾಯ ಬರುವ ರೀತಿಯಲ್ಲಿ ಒಂದು ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯ ಬಗ್ಗೆ ತಿಳಿಸಿದ ರಘು ತಮ್ಮಯ್ಯನವರು, ಕಕ್ಕಬೆಯಲ್ಲಿ ಒಂದು ಸೂಕ್ತ ಜಾಗ ದೊರೆತರೆ ಸಂಘದ ವತಿಯಿಂದ ಪೆಟ್ರೋಲ್‌ ಬಂಕ್‌ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಹಕಾರ ಕ್ಷೇತ್ರದ ಇನ್ನೊಂದು ಮಗ್ಗುಲಾಗಿರುವ ಕಕ್ಕಬೆ ವಿವಿದೋದ್ದೇಶ ಸಹಕಾರ ಧವಸ ಭಂಡಾರದಲ್ಲಿ 2005 ರಿಂದ 2010ರವರಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ರಘು ತಮ್ಮಯ್ಯನವರು, ಧವಸ ಭಂಡಾರವು ನಷ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಸಂದರ್ಭ 2010ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸುಮಾರು 16 ವರ್ಷಗಳಿಂದ ಲೆಕ್ಕ ಪರಿಶೋಧನೆ ಮಾಡದೆ ನೆನೆಗುದಿಗೆ ಬಿದ್ದು  ನಷ್ಟದಲ್ಲಿ ನಡೆಯುತ್ತಿದ್ದ ಕಕ್ಕಬೆ ವಿವಿದೋದ್ದೇಶ ಸಹಕಾರ ಧವಸ ಭಂಡಾರವನ್ನು ಸರ್ಕಾರ ವಹಿಸಿಕೊಳ್ಳುವ ಸಂದರ್ಭ, ಇವರು ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ಧವಸ ಭಂಡಾರದ ಕಟ್ಟಡವನ್ನು ದುರಸ್ಥಿಗೊಳಿಸಿ ಸಂಘಕ್ಕೆ ಕಾಯಕಲ್ಪವನ್ನು ನೀಡಿದರು. ಶಾಸಕರ ಅನುದಾನದಿಂದ 4 ಲಕ್ಷ ರೂಪಾಯಿಗಳನ್ನು ತರಿಸಿಕೊಂಡು ಸಮುದಾಯ ಭವನ ನಿರ್ಮಿಸುವ ನಿಟ್ಟಿನಲ್ಲಿ ಸಫಲರಾಗಿದ್ದಾರೆ. ಧವಸ ಭಂಡಾರಕ್ಕೆ ಕಾಯಕಲ್ಪ ನೀಡುವಲ್ಲಿ  ಕೊಡಗು ಡಿಸಿಸಿ ಬ್ಯಾಂಕ್‌ ಹಾಗೂ ಕೊಡಗು ಸಹಕಾರ ಯೂನಿಯನ್‌ ನೀಡಿದ ಸಹಕಾರವನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಂಡರು.

ಅಧಃಪತನಕ್ಕೆ ಹೋಗುತ್ತಿದ್ದ ಕಕ್ಕಬೆ ವಿವಿದೋದ್ದೇಶ ಸಹಕಾರ ಧವಸ ಭಂಡಾರವನ್ನು ಪುನರ್‌ಜೀವನಗೊಳಿಸುವಲ್ಲಿ ಧವಸ ಭಂಡಾರದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕಂಬೇಯಂಡ ಎನ್.‌ ಕುಂಜ್ಞಪ್ಪನವರು ಇವರೊಂದಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದನ್ನು ರಘು ತಮ್ಮಯ್ಯನವರು ಈ ಸಂದರ್ಭದಲ್ಲಿ ಸ್ಮರಿಸಿದರು. ಪ್ರಸ್ತುತ ಕಕ್ಕಬೆ ವಿವಿದೋದ್ದೇಶ ಸಹಕಾರ ಧವಸ ಭಂಡಾರದಲ್ಲಿ ಆಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಕಲಿಯಾಟಂಡ ಎ. ತಮ್ಮಯ್ಯ(ರಘು)ರವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಮುಂದಿನ ಯುವಶಕ್ತಿಗೆ ರಘು ತಮ್ಮಯ್ಯನವರು ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಘು ತಮ್ಮಯ್ಯನವರು ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. 1998 ರಲ್ಲಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್‌ನ ಅಧ್ಯಕ್ಷರಾಗಿ ಆಯ್ಕೆಗೊಂಡು ಸುಮಾರು 18 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸದಸ್ಯರ ಮತ್ತು ದಾನಿಗಳ ಸಹಕಾರದೊಂದಿಗೆ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್‌ನ ನೂತನ ಕಟ್ಟಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿರುತ್ತಾರೆ. ಕಕ್ಕಬ್ಬೆೆ ಫಾರ್ಮಸ್ ಕ್ಷಬ್‌ನಲ್ಲಿ 3 ವರ್ಷ ಅಧ್ಯಕ್ಷರಾಗಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಕಕ್ಕಬ್ಬೆ ಪ್ರೌಢಶಾಲೆಯಲ್ಲಿ 3 ವರ್ಷ ನಿರ್ದೇಶಕರಾಗಿ ಸೇವೆಸಲ್ಲಿಸಿರುತ್ತಾರೆ.

ಮೂಲತಃ ಕೃಷಿಕರಾಗಿರುವ ಕಲಿಯಾಟಂಡ ಎ. ತಮ್ಮಯ್ಯ(ರಘು)ರವರು, ಕುಂಜಿಲ ಗ್ರಾಮದ ಕಲಿಯಾಟಂಡ ಅಚ್ಚಮ್ಮ ಬೊಳ್ಳವ್ವ ದಂಪತಿಯ ಕಿರಿಯ ಪುತ್ರರಾದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಕ್ಕಬ್ಬೆಯಲ್ಲಿ ಪೂರ್ಣಗೊಳಿಸಿ ನಂತರ ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡರು. 1989 ನೇ ಇಸವಿಯಿಂದ ಕೊಡಗಿನಲ್ಲಿ ನೆಲೆಸಿ ಕಾಫಿ ಕೃಷಿಯಲ್ಲಿ ತೊಡಗಿಸಿಕೊಂಡು ತದ ನಂತರದಲ್ಲಿ 15 ವರ್ಷಗಳ ಕಾಲ ಕಾಫಿ ಉದ್ಯಮಿಯಾಗಿದ್ದರು.

1998ರಲ್ಲಿ ಪಾಂಡಂಡ ಅನಿಲ ಎಂಬವರನ್ನು ವಿವಾಹವಾಗಿ ಇಬ್ಬರು ಪುತ್ರಿಯರನ್ನು ಹೊಂದಿರುತ್ತಾರೆ. ಇವರ ಪುತ್ರಿಯರಾದ ಭವಿಷ್ಯ ‌ಸೆಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ ಎಂ.ಕಾಂ(ಇಂಟರ್ ನೇಷನಲ್ ಬಿಸ್‌ನೆಸ್) ಪದವಿ ವ್ಯಾಸಂಗ ಮುಗಿಸಿ ಇದೀಗ ಇನ್‌ಸ್ಯೂರೆನ್ಸ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡನೇ ಪುತ್ರಿಯಾದ ದೃಷ್ಯ ಕ್ರೈಸ್ಟ್ ಕಾಲೇಜು ಬೆಂಗಳೂರಿನಲ್ಲಿ ಬಿ.ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಲಿಯಾಟಂಡ ಎ. ತಮ್ಮಯ್ಯ(ರಘು)ರವರು  ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕಕ್ಕಬೆ ಗ್ರಾಮದಲ್ಲಿ  ಪ್ರಸ್ತುತ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 01- 03- 2023

Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.
Previous Post Next Post