ಕೇಟೋಳಿರ ಹರೀಶ್ ಪೂವಯ್ಯ, ಸಹಕಾರಿಗಳು: ನಾಪೋಕ್ಲು- Napoklu

 ಕೇಟೋಳಿರ ಹರೀಶ್ ಪೂವಯ್ಯ, ಸಹಕಾರಿಗಳು: ನಾಪೋಕ್ಲು- Napoklu



ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದವರಾದ ಕೇಟೋಳಿರ ಹರೀಶ್ ಪೂವಯ್ಯನವರು ಪ್ರಸ್ತುತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಹರೀಶ್ ಪೂವಯ್ಯ ಅವರ ತಂದೆ ದಿವಂಗತ ಕೇಟೋಳಿರ ಸೋಮಣ್ಣನವರು ಹಿರಿಯ ಸಹಕಾರಿ ಗಳಾಗಿದ್ದರು. ಇವರು 1977-78ರ ಅವಧಿಯಲ್ಲಿ ನಾಪೋಕ್ಲು ವಿ.ಎಸ್.ಎಸ್.ಎನ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ತಂದೆಯವರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದನ್ನು ಮನಗಂಡು ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು ಎಂದು ಹರೀಶ್ ಪೂವಯ್ಯ ಅವರು ತಿಳಿಸಿದರು.


2009ರಲ್ಲಿ ಕೊಡಗು ಡಿ.ಸಿ.ಸಿ. ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾದ ಹರೀಶ್ ಪೂವಯ್ಯನವರು 2014ರಿಂದ 2019ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತದನಂತರ 2019ರ ಕೊಡಗು ಡಿ.ಸಿ.ಸಿ. ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಯ್ಕೆಗೊಂಡು ಪ್ರಸ್ತುತ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


2019-20 ರ ಸಾಲಿನಲ್ಲಿ ಕೊಡಗು ಡಿ.ಸಿ.ಸಿ. ಬ್ಯಾಂಕ್ 8 ಕೋಟಿಯಷ್ಟು ಲಾಭವನ್ನು ಗಳಿಸಿದ್ದು, ಗರಿಷ್ಠ ಮಟ್ಟದ ಸಾವಿರ ಕೋಟಿಯಷ್ಟು ಠೇವಣಿಯನ್ನು ಕೊಡಗು ಡಿ.ಸಿ.ಸಿ. ಬ್ಯಾಂಕ್ ಸಂಗ್ರಹಿಸಿದೆ ಎಂದು ತಿಳಿಸಿದ  ಕೇಟೋಳಿರ ಹರೀಶ್ ಪೂವಯ್ಯ,  ಕೊಡಗು ಡಿ.ಸಿ.ಸಿ. ಬ್ಯಾಂಕ್‌  ಶತಮಾನದ ಹೊಸ್ತಿಲಲ್ಲಿರುವ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆಯೆನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಕೊಡಗು ಡಿ.ಸಿ.ಸಿ. ಬ್ಯಾಂಕ್‌ನ 21 ಶಾಖೆಗಳು ಲಾಭದಲ್ಲಿದ್ದು, 2019, 2020, 2021 ರಲ್ಲಿ ಬಾಳೆಲೆ, ಟಿ-ಶೆಟ್ಟಿಗೇರಿ, ಕೊಡ್ಲಿಪೇಟೆ, ಹೆಬ್ಬಾಲೆಯಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ ಹರೀಶ್ ಪೂವಯ್ಯನವರು ಬ್ಯಾಂಕಿನ ವತಿಯಿಂದ ಜಿಲ್ಲೆಯಾದ್ಯಂತ ಒಟ್ಟು 15 ಎಟಿಎಂಗಳು ಕಾರ್ಯನಿರ್ವಹಿಸುತ್ತಿದೆ ಎಂದರು.


ಪೊನ್ನಂಪೇಟೆ ಹಾಗೂ ಅಮ್ಮತ್ತಿಯಲ್ಲಿ  ಸ್ವಂತ ಕಟ್ಟಡವನ್ನು ಖರೀದಿಸಿ ಅಲ್ಲಿನ ಬ್ಯಾಂಕಿನ ಶಾಖೆಗಳನ್ನು ಸಂತ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹರೀಶ್ ಪೂವಯ್ಯ ಈ ಸಂದರ್ಭದಲ್ಲಿ ತಿಳಿಸಿದರು. ಭಾಗಮಂಡಲ ಮತ್ತು ಮಾದಾಪುರದಲ್ಲಿ ಹೊಸ ಶಾಖೆಗಳ ಪ್ರಾರಂಭಕ್ಕೆ ಪ್ರಯತ್ನ ಸಾಗುತ್ತಿದೆ ಎಂದರು.


2021ರ ಜೂನ್ 26ಕ್ಕೆ ಕೊಡಗು ಡಿ.ಸಿ.ಸಿ. ಬ್ಯಾಂಕ್ ಶತಮಾನವನ್ನು ಆಚರಿಸುತ್ತಿರುವ ನೆನಪಿನಲ್ಲಿ 9 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಲಿದೆ ಎಂದು ತೀಳಿಸಿದ  ಕೇಟೋಳಿರ ಹರೀಶ್ ಪೂವಯ್ಯ, ಗ್ರಾಮೀಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೊಡಗಿನ ಗ್ರಾಮ ಗ್ರಾಮಗಳಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಮಾನ ಮನಸ್ಕ ಯುವಕರ ತಂಡದ ಆಡಳಿತ ಮಂಡಳಿಯ ಸಹಕಾರದೊಂದಿಗೆ 2012- 17ರ ಅವಧಿಯಲ್ಲಿ ಹಳೆಯ ಶಿಥಿಲಾವಸ್ಥೆಯಲ್ಲಿದ್ದ ಗೊಬ್ಬರದ ಗೋದಾಮನ್ನು ಕೆಡವಿ 21 ಲಕ್ಷ ವೆಚ್ಚದಲ್ಲಿ ಹೊಸ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ ಎಂದು ಹರೀಶ್ ಪೂವಯ್ಯನವರು ತಿಳಿಸಿದರು. ಬೇತುಗ್ರಾಮದಲ್ಲಿರುವ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಜಾಗದಲ್ಲಿ 44 ಲಕ್ಷ ವೆಚ್ಚದಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಹಾಗೂ ಅತ್ಯಾಧುನಿಕ ಅಕ್ಕಿ ಗಿರಣಿಯನ್ನು ಅದೇ 2012-17 ಸಾಲಿನಲ್ಲಿ ಪ್ರಾರಂಭಿಸಲಾಗಿದೆ ಎಂದರು.


2019ರ ಅಕ್ಟೋಬರ್ ತಿಂಗಳಿನಲ್ಲಿ ನಾಪೋಕ್ಲು ಫ್ಯಾಕ್ಸ್‌ನ ನೂತನ ಆಡಳಿತ ಕಚೇರಿ ಸಭಾಂಗಣ, ಕೃಷಿ ಪರಿಕರಗಳ ಮಾರಾಟ ಮಳಿಗೆ, ವಾಣಿಜ್ಯ ಮಳಿಗೆಯನ್ನು ಸುಮಾರು 1 ಕೋಟಿ 10ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ ಹರೀಶ್ ಪೂವಯ್ಯ, ಇದಕ್ಕೆಲ್ಲ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿದೆ ಎಂದು ತಿಳಿಸಿದರು.


ಹಿರಿಯರು ಈ ಹಿಂದೆ ರಾಜಕೀಯ ರಹಿತವಾಗಿ ಸಹಕಾರ ಮನೋಭಾವದಿಂದ ಸಹಕಾರ ಕ್ಷೇತ್ರವನ್ನು ಕಟ್ಟಿದರು ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟ ಹರೀಶ್ ಪೂವಯ್ಯನವರು, ಪಾರದರ್ಶಕ ಆಡಳಿತ ಹಾಗೂ ಸೇವಾ ಮನೋಭಾವದ ಸ್ವಾರ್ಥರಹಿತ ಸೇವೆಯಿಂದ ಸಹಕಾರ ಕ್ಷೆತ್ರ ಇನ್ನಷ್ಟು ಪ್ರಗತಿಯತ್ತ ಸಾಗಲು ಸಹಕಾರಿಯಾಗುತ್ತದೆ  ಎಂದು ತಿಳಿಸಿದರು. ಗುಂಪುಗಾರಿಕೆ ಮಾಡುವುದರಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ಕೇಟೋಳಿರ ಹರೀಶ್ ಪೂವಯ್ಯ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.


ತನ್ನ ಅಧಿಕಾರದ ಆಡಳಿತಾವಧಿಯಲ್ಲಿ ಕೊಡಗು ಡಿ.ಸಿ.ಸಿ ಬ್ಯಾಂಕನ್ನು ರಾಜ್ಯಮಟ್ಟದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿಸಲು ಕೊಡಗು ಡಿ.ಸಿ.ಸಿ. ಬ್ಯಾಂಕಿನ ಆಡಳಿತ ಮಂಡಳಿಗೆ ನನ್ನ.ಪೂರ್ಣಮಟ್ಟದ ಸಹಕಾರ ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.


ಸಹಕಾರ ಕ್ಷೇತ್ರದಲ್ಲಿ ಯುವಶಕ್ತಿಯು ಹೆಚ್ಚು ಹೆಚ್ಚು ಪಾಲ್ಗೊಂಡು ಸೇವಾ ಮನೋಭಾವದಿಂದ ಸಹಕಾರ ಕ್ಷೇತ್ರವನ್ನು ಮುನ್ನಡೆಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ತಿಳಿಸಿದರು.


ರಾಜಕೀಯವಾಗಿ ತಮ್ಮನ್ನು ಗುರುತಿಸಿ ಕೊಂಡಿರುವ ಕೇಟೋಳಿರ ಹರೀಶ್ ಪೂವಯ್ಯನವರು ಬಿ.ಜೆ.ಪಿ.ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಹಿರಿಯ ಸಹಕಾರಿಗಳಾದ ಬಿದ್ದಾಟಂಡ ರಮೇಶ್ ಚಂಗಪ್ಪನವರ ಮನದಾಸೆಯ ಮೇರೆಗೆ ಮಡಿಕೇರಿ ಎ.ಪಿ.ಎಂ.ಸಿ.ಯ ಚುನಾವಣೆಯಲ್ಲಿ ಮೊದಲ ಬಾರಿಗೆ ಘಟಾನುಘಟಿಗಳೊಂದಿಗೆ ಮುಖಾಮುಖಿಯಾಗಿ ಸ್ಪರ್ಧಿಸಿ, ನಿರ್ದೇಶಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ನಾಪೋಕ್ಲು ಗ್ರಾಮ ಪಂಚಾಯಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಸಾಮಾಜಿಕವಾಗಿ ಕೊಳಕೇರಿ ಭಗವತಿ ಯುವಕ ಸಂಘದ ಅಧ್ಯಕ್ಷರಾಗಿ, ಶಿವಾಜಿ ಯುವಕ ಸಂಘ ನಾಪೋಕ್ಲು ಇದರ ಸ್ಥಾಪಕ ಸದಸ್ಯರಾಗಿ,  ನಾಪೋಕ್ಲು ನಾಡು ಗಣೇಶೋತ್ಸವ ಸಮಿತಿಯ ಸ್ಥಾಪಕ ಸದಸ್ಯರಾಗಿ,  ನಾಪೋಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ, ಭಜರಂಗ ದಳದ ಮಡಿಕೇರಿ ತಾಲೂಕು ಸಂಚಾಲಕರಾಗಿ ಹಾಗೂ ವಿಶ್ವಹಿಂದೂ ಪರಿಷತ್ತಿನ ನಾಪೋಕ್ಲು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿದ್ದಾರೆ.


ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹರೀಶ್ ಪೂವಯ್ಯನವರು ನಾಪೋಕ್ಲು ಜೂನಿಯರ್ ಕಾಲೇಜಿನ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.


ಕೇಟೋಳಿರ ಹರೀಶ್‌ ಪೂವಯ್ಯನವರ ತಂದೆ ದಿವಂಗತ ಕೇಟೋಳಿರ ಸೋಮಣ್ಣನವರು ಕೊಡಗಿನ ಅಂದಿನ ಜನಸಂಘದ ಹಿರಿಯ ಪ್ರಭಾವಿ ಧುರೀಣರಾಗಿದ್ದರು. ಮೂಲತಃ ಕೃಷಿಕರಾಗಿರುವ ಕೇಟೋಳಿರ ಹರೀಶ್‌ ಪೂವಯ್ಯನವರು 89 ವರ್ಷ ಪ್ರಾಯದ ತಾಯಿ ಸೀತಮ್ಮನವರೊಂದಿಗೆ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತಿದೆ.



ಸಂದರ್ಶನ ದಿನಾಂಕ: 16-03-2021



Search Coorg Media

Coorg's Largest Online Media Network 


Previous Post Next Post