ಪಟ್ರಪಂಡ ರಘು ನಾಣಯ್ಯ, ಸಹಕಾರಿಗಳು: ಬೇಟೋಳಿ. Betoli

ಪಟ್ರಪಂಡ ರಘು ನಾಣಯ್ಯ, ಸಹಕಾರಿಗಳು: ಬೇಟೋಳಿ. Betoli 

ಪಟ್ರಪಂಡ ರಘು ನಾಣಯ್ಯರವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. 

ಜನಸೇವೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ದೃಷ್ಠಿಕೋನದಿಂದ ಸಹಕಾರ ಕ್ಷೇತ್ರಕ್ಕೆ ಧುಮುಕಿದ ಪಟ್ರಪಂಡ ರಘು ನಾಣಯ್ಯರವರು, 1999 ರಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ಮುಂದಿನ ಅವಧಿಯಲ್ಲಿ ಸಂಘದ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರನ್ನು"ಸರ್ಚ್‌ ಕೂರ್ಗ್‌ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್‌ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪಟ್ರಪಂಡ ರಘು ನಾಣಯ್ಯರವರು, “ ಕಳೆದ ಎರಡು ದಶಕಗಳ ಹಿಂದೆ ನಮ್ಮ ಸಹಕಾರ ಸಂಘದಲ್ಲಿ ಸದಸ್ಯರು ಸಾಲವನ್ನು ಪಡೆಯಲು ನಾಲಕೈದು ತಿಂಗಳುಗಲ ಕಾಲ ಹೆಣಗಾಡಬೇಕಾಗಿತ್ತು. ಸದಸ್ಯರ ತುರ್ತು ಅವಶ್ಯಕತೆಗೆ ಸಾಲವನ್ನು ನೀಡಲು ಅಂದಿನ ಸಂಘದ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗದವರು ಇಲ್ಲ ಸಲ್ಲದ ಕಾನೂನುಗಳ ನೆಪವೊಡ್ಡಿ ಸತಾಯಿಸುತ್ತಿದ್ದರು. ಈ ರೀತಿ ಏತಕ್ಕಾಗಿ ಸಹಕಾರ ಸಂಘದಲ್ಲಿ ನಡೆಯುತ್ತಿದೆ ಎಂಬ ಕುತೂಹಲ ನನ್ನಲ್ಲಿ ಮೂಡಿತ್ತು.  ಹಾಗಾಗಿ ಸಹಕಾರ ಸಂಘದಲ್ಲಿ ನಡೆಯುವ ಒಳ ಗುಟ್ಟನ್ನು ಅರಿಯುವ ನಿಟ್ಟಿನಲ್ಲಿ ಕಳೆದ 25 ವರ್ಷಗಳ ಹಿಂದೆ ನಾನು ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಫರ್ಧಿಸಿ ಮೊದಲ ಬಾರಿಗೆ ಆಯ್ಕೆಗೊಂಡು ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ.

ಆಗಿನ ನಮ್ಮ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿಯೇ ಅಧ್ಯಕ್ಷರು, ನಿರ್ದೇಶಕರುಗಳು  ಹಾಗೂ ಉಪಾಧ್ಯಕ್ಷನಾದ ನಾನು ಸೇರಿ ಒಂದು ತೀರ್ಮಾನಕ್ಕೆ ಬಂದೆವು. ಸಂಘದ ಕಾರ್ಯದರ್ಶಿಗಳಿಗೆ ಇಂದಿನಿಂದಲೇ ಸದಸ್ಯರು ಸಂಘದಿಂದ ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು, ರೀತಿ ರಿವಾಜುಗಳನ್ನು ನೋಟೀಸ್‌ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕೆಂದು ಸೂಚನೆಯನ್ನು ನೀಡ್ಡಿದ್ದೇವು. ಈ ನಿಟ್ಟಿನಲ್ಲಿ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದ್ದೇವು.

ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2017-18ರಲ್ಲಿ 13ಲಕ್ಷ ಲಾಭ, 2018-19ರಲ್ಲಿ 11.5ಲಕ್ಷ ಲಾಭ ಹಾಗೂ 2019-20ರಲ್ಲಿ 13 ಲಕ್ಷ ಲಾಭ ಪಡೆದಿದೆ. ಸದಸ್ಯರಿಗೆ ನೀಡಿದ ಸಾಲಗಳ ಶೇಕಡ 100%ರಷ್ಟು ಸಕಾಲ ಮರುಪಾವತಿಯೆ ಪ್ರಮುಖ ಕಾರಣವಾಗಿದೆ. ಹಾಗೆ ಜಾಮೀನು ಸಾಲ, ಕೃಷಿ ಸಾಲ, ಗೊಬ್ಬರ ಸಾಲ, ಪಿಗ್ಮಿ ಸಾಲ, ಬಳಕೆ ಸಾಲ,  ಗೊಬ್ಬರ ಮಾರಾಟ ಹಾಗೂ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಿರುವುದರಿಂದ ದೊರಕುತ್ತಿರುವ ಆಧಾಯದಿಂದ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದೆ.

2007ರ ಅವಧಿಯಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೊಬ್ಬರ ದಾಸ್ತಾನು ಗೋದಾಮು ಹಾಗೂ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ. 2017ರಲ್ಲಿ 73ಲಕ್ಷ ವೆಚ್ಚದಲ್ಲಿ ಸಂಘದ ನೂತನ ಆಡಳಿತ ಕಛೇರಿ, ಗೋದಾಮು ಹಾಗೂ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ತಮ್ಮ ಅಧಿಕಾರವಧಿಯಲ್ಲಿ ಜಾಮೀನು ಸಾಲದ ಪರಿಮಿತಿಯನ್ನು ಹೆಚ್ಚಿಸಲಾಗಿದ್ದು, ಅದೇ ರೀತಿ ಗೊಬ್ಬರ ಸಾಲವನ್ನು ಹೆಚ್ಚು ಮಾಡಲಾಗಿದೆ. ಸಂಘದ ನೂತನ ಕಟ್ಟಡಕ್ಕಾಗಿ ಮಾಡಿದ 74 ಲಕ್ಷ ಸಾಲದಲ್ಲಿ ಬಹುಪಾಲು ಮರುಪಾವತಿ ಮಾಡಿ ಬಾಕಿ 12ಲಕ್ಷದಷ್ಟು ಮಾತ್ರ ಮರುಪಾತಿಸಲು ಇದೆ. 

ನಮ್ಮ ಅಧಿಕಾರವಧಿಯಲ್ಲಿ ಕೊಡಗು ಡಿ.ಸಿ.ಸಿ. ಬ್ಯಾಂಕಿನಿಂದ ಹಾಗೂ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನಿಂದ ಉತ್ತಮ ಕಾರ್ಯನಿರ್ವಹಣೆಗೆ ಸತತ ಐದು ಬಾರಿ ಪ್ರಶಸ್ತಿ ದೊರಕಿದೆ. ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ನಮ್ಮ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ.

ಸಂಘದ ಸದಸ್ಯರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಸುಲಭವಾಗಿ ಸಾಲ ನೀಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯಿದೆ. ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಪ್ರಗತಿಯತ್ತ ಸಾಗಿಸಲು ಪ್ರಯತ್ನಿಸಲಾಗುತ್ತಿದೆ.

ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಪೂರ್ಣ ಮಟ್ಟದಲ್ಲಿ ಇರಬಾರದು, ಸರ್ಕಾರವು ಸಹಕಾರ ಸಂಘಗಳ ಮೇಲೆ ಸ್ವಲ್ಪ ಮಟ್ಟಿನಲ್ಲಿ ನಿಗಾ ವಹಿಸಿದರೆ ಉತ್ತಮ ಎಂಬುವುದು ನನ್ನ ಅಭಿಪ್ರಾಯವಾಗಿದೆ. ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂಬುವುದು ನನ್ನ ಸಲಹೆಯಾಗಿದೆ. 

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು. ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಮುಂದಿನ ಯುವಶಕ್ತಿಗೆ ನನ್ನ ಸಂದೇಶವಾಗಿದೆ.

ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪಟ್ರಪಂಡ ರಘು ನಾಣಯ್ಯರವರು, ಕೊಡಗು‌ ಡಿ.ಸಿ.ಸಿ. ಬ್ಯಾಂಕಿನಲ್ಲಿ 10 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವೀರಾಜಪೇಟೆ ಎ.ಪಿ.ಸಿ.ಎಂ.ಎಸ್. ಆಡಳಿತ ಮಂಡಳಿಯಲ್ಲಿ 3 ವರ್ಷಗಳ ಕಾಲ ಕೊಡಗು‌ ಡಿ.ಸಿ.ಸಿ. ಬ್ಯಾಂಕಿನಿಂದ ನಾಮ ನಿರ್ದೇಶಕರಾಗಿ  ಸೇವೆ ಸಲ್ಲಿಸಿದ್ದಾರೆ. 

ಕೃಷಿ ಕ್ಷೇತ್ರದಲ್ಲಿ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(RMC)ಯ ಅಧ್ಯಕ್ಷರಾಗಿ 2 ವರ್ಷಗಳ  ಕಾಲ ಸೇವೆ. ಹಾಗೆ ವೀರಾಜಪೇಟೆ ಕೃಷಿಕ ಸಮಾಜದ ಅಧ್ಯಕ್ಷರಾಗಿ ಸತತವಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿಕ ಸಮಾಜದ ಮುಖಾಂತರ ಮಾಜಿ ಶಾಸಕರಾದ ಕೆ.ಜಿ. ಬೋಪ್ಪಯ್ಯನವರ ಸಹಕಾರದಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಾವರಿಗೆ ಅಲ್ಯೂಮಿನಿಯಂ ಪೈಪ್‌ಗಳು, ಟಾರ್ಪಾಲ್‌ಗಳು ಹಾಗೂ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ಶ್ರಮಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಅಂದಿನ ಜನಸಂಘದಿಂದ ರಾಜಕೀಯ ಜೀವನ ಪ್ರಾಂಭಿಸಿದ ಪಟ್ರಪಂಡ ರಘು ನಾಣಯ್ಯರವರು,  1975 ರ ದೇಶದ ತುರ್ತು ಪರಿಸ್ಥಿತಿ ಸಂದರ್ಭ ಒಂದು ತಿಂಗಳು ಏಳು ದಿನಗಳ ಕಾಲ ಮೈಸೂರಿನ ಜೈಲಿನಲ್ಲಿ ಬಂದಿಯಾಗಿದ್ದರು. ಆಗ ಇವರಿಗೆ 17 ವರ್ಷ ಪ್ರಾಯವಾಗಿತ್ತು. ಕೊಡಗಿನ ಭಾರತೀಯ ಜನತಾ ಪಾರ್ಟಿಯ ಭೀಷ್ಮರಾಗಿದ್ದ ದಿವಂಗತ ಕುಟ್ಟಂಡ ನಂದಾ ಉತ್ತಯ್ಯನವರ ಗರಡಿಯಲ್ಲಿ ಪಳಗಿದ್ದ ಅನುಭವ ಇವರಿಗೆ ಇದೆ. ವಿರಾಜಪೇಟೆ ಬಿ.ಜೆ.ಪಿ. ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರಾಗಿ ಪ್ರಸ್ತುತ ಕೊಡಗು ಜಿಲ್ಲಾ ಬಿ.ಜೆ.ಪಿ.ಯ ಖಾಯಂ ಆಹ್ವಾನಿತರಾಗಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಕರಾದ ಹೆಚ್.ಡಿ. ಬಸವರಾಜುರವರು ಇದ್ದ ಸಂದರ್ಭ ವಿರಾಜಪೇಟೆ ಸರಕಾರಿ ಜೂನಿಯರ್‌ ಕಾಲೇಜಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಂದರ್ಭ ಪದವಿ ಕಾಲೇಜಿಗೆ 1.10 ಏಕರೆ ಹಾಗೂ ಒಳಾಂಗಣ ಕ್ರೀಡಾಂಗಣಕ್ಕೆ 1 ಏಕರೆ ಜಾಗವನ್ನು ಮಂಜೂರು ಮಾಡುವಲ್ಲಿ ಶ್ರಮ ವಹಿಸಿದ್ದಾರೆ. ಹಾಗೆ ವೀರಾಜಪೇಟೆ ಸರಕಾರಿ ಪದವಿ ಕಾಲೇಜಿನ ನೀರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಶೀಟೋರಿಯಾ ಕರಾಟೆಯಲ್ಲಿ 2 ಡಾನ್‌ ಬ್ಲಾಕ್‌ ಬೆಲ್ಟ್‌ ಪಡೆದಿದ್ದಾರೆ. ಕರಾಟೆಯಲ್ಲಿ ಎರಡು ರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದಾರೆ.

ಪಟ್ರಪಂಡ ರಘು ನಾಣಯ್ಯರವರ ಕುಟುಂಬ ಪರಿಚಯ:

ಪಟ್ರಪಂಡ ರಘು ನಾಣಯ್ಯರವರ ತಂದೆ:  ದಿವಂಗತ ಪಟ್ರಪಂಡ ಸಿ. ಭೀಮಯ್ಯನವರು. ಇವರು ಅಂದಿನ ಜನಸಂಘದ ರಾಜಕೀಯ ಧುರೀಣರಾಗಿದ್ದರು. ಹಾಗೆ ಬೇಟೋಳಿ ವಿವಿದೋದ್ದೇಶ ಸಹಕಾರ ಧವಸ ಭಂಡಾರದ ಅಧ್ಯಕ್ಷರಾಗಿ, ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ  ಹಿರಿಯ ಸಹಕಾರಿಗಳಾಗಿದ್ದರು. ತಾಯಿ: ದಿವಂಗತ ಸೀತಮ್ಮ. ಪತ್ನಿ: ಪೊನ್ನಮ್ಮ ಗೃಹಿಣಿಯಾಗಿದ್ದಾರೆ. ಮಗಳು: ದೇಚ್ಚಮ್ಮ, ಚಕ್ಕೇರ ಗೌತಮ್‌ರವರನ್ನು ವಿವಾಹಿತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೊಮ್ಮಗ: ವೇದ್‌ ಕಾವೇರಪ್ಪ. ಮಗ: ಶ್ರವಣ್‌ ಪೊನ್ನಪ್ಪ, ಸೋಮೆಯಂಡ ಶ್ರೇಯಾರವರನ್ನು ವಿವಾಹಿತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಪಟ್ರಪಂಡ ರಘು ನಾಣಯ್ಯನವರು ಪ್ರಸ್ತುತ ಕುಟುಂಬ ಸಮೇತ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಟೋಳಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 03-07-2023

Previous Post Next Post