Header Ads Widget

Responsive Advertisement

ಪೊನ್ನಚಂಡ ಎಸ್ . ಮಾದಪ್ಪ, ಸಹಕಾರಿಗಳು: ಚೆಯ್ಯಂಡಾಣೆ - Cheyandane

 ಪೊನ್ನಚಂಡ ಎಸ್ . ಮಾದಪ್ಪ, ಸಹಕಾರಿಗಳು: ಚೆಯ್ಯಂಡಾಣೆ - Cheyandaneಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪೊನ್ನಚಂಡ ಎಸ್. ಮಾದಪ್ಪನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.


2003ರಲ್ಲಿ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂದಿನ ನಿರ್ದೇಶಕರಾದ ಬಿ.ಎಂ. ಲವಕುಮಾರ್ ಹಾಗೂ ಅಧ್ಯಕ್ಷರಾಗಿದ್ದ ದಿವಂಗತ ಶ್ರೀ ಶ್ಯಾನುಭೋಗರ ಎಸ್. ಸುಬ್ಬರಾವ್ ಇವರ ಒತ್ತಾಸೆಯ ಮೇರೆಗೆ ಅವಿರೋಧದಿಂದ ನಿರ್ದೇಶಕರಾಗಿ ಆಯ್ಕೆಯಾದ ಪೊನ್ನಚಂಡ ಮಾದಪ್ಪನವರು ಸತತ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


2007 ರಲ್ಲಿ ದಿವಂಗತ ಶ್ರೀ ಶ್ಯಾನುಭೋಗರ ಸುಬ್ಬರಾವ್‌ರವರು ಸ್ವ-ಇಚ್ಛೆಯಿಂದ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ಪೊನ್ನಚಂಡ ಎಸ್. ಮಾದಪ್ಪನವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. 2012ರ ಚುನಾವಣೆಯಲ್ಲಿ ಸ್ಪರ್ಧಿಸಿ 2017ರ ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮಾದಪ್ಪನವರು, ಮರಳಿ 2017ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಹಲವಾರು ಗೊಂದಲಗಳ ಮಧ್ಯೆ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಷ್ಟದಲ್ಲಿದ್ದು,  2019-20 ರ ಸಾಲಿನಲ್ಲಿ 30 ಲಕ್ಷ 85 ಸಾವಿರ ನಿವ್ವಳ ಲಾಭವನ್ನು ಹೊಂದಿದೆ ಎಂದ ಮಾದಪ್ಪನವರು,  68 ಲಕ್ಷದ 13 ಸಾವಿರ ನಷ್ಟವಾಗಿದೆ ಎಂದರು.


2017 ರವರೆಗೆ ಸಂಘವು ನಷ್ಟದ ಹಾದಿಯಲ್ಲಿದ್ದು, ಅಲ್ಲಿಂದ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಹಲವಾರು ಕ್ರಿಯಾ ಯೋಜನೆಗಳನ್ನು ರೂಪಿಸಿ, ಲಾಭದ ಹಾದಿಯಲ್ಲಿ ಸಾಗುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾದಪ್ಪನವರು ಈ ಸಂದರ್ಭದಲ್ಲಿ ತಿಳಿಸಿದರು.


ನಮ್ಮ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂದಿನ ಕೆಲವು ಸಿಬ್ಬಂದಿಗಳು 2015, 2016, 2017ರಲ್ಲಿ ಸತತ ಮೂರು ವರ್ಷಗಳ ಕಾಲ ಸಂಘದ ಆದಾಯಕ್ಕೆ ನಷ್ಟವನ್ನುಂಟುಮಾಡಿದ್ದಾರೆ ಎಂದ ಪೊನ್ನಚಂಡ ಎಸ್ .ಮಾದಪ್ಪನವರು, 2017ರಲ್ಲಿ ಹೊಸ ಆಡಳಿತ ಮಂಡಳಿ ಬಂದಾಗ ಸ್ಟಾಕ್ ಚೆಕ್ ಮಾಡಿದ ಸಂದರ್ಭದಲ್ಲಿ ಈ ಹಗರಣ ಬೆಳಕಿಗೆ ಬಂತು ಎಂದು ಹೇಳಿದರು.


2006 ಮತ್ತು 2007 ರಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿಂದ ಪ್ರಶಸ್ತಿಯನ್ನು, 2007 ಮತ್ತು 2008  ಹಾಗೂ 2012 ಮತ್ತು 2013 ರಲ್ಲಿ ಕೊಡಗು ಡಿ.ಸಿ.ಸಿ. ಬ್ಯಾಂಕಿನಿಂದ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷರಾದ ಪೊನ್ನಚಂಡ ಎಸ್ .ಮಾದಪ್ಪನವರು ತಿಳಿಸಿದರು.


2012-2013 ರಲ್ಲಿ ಕೃಷಿ ಪರಿಕರಗಳ ದಾಸ್ತಾನು ಮಾಡಲು ಸುಮಾರು 5 ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗಿದೆ ಎಂದ ಪೊನ್ನಚ್ಚಂಡ ಎಸ್. ಮಾದಪ್ಪನವರು, 2016 ರಲ್ಲಿ 23 ಲಕ್ಷ ವೆಚ್ಚದಲ್ಲಿ 600 ಮೆಟ್ರಿಕ್ ಟನ್ ಸಾಮರ್ಥ್ಯದ ದೊಡ್ಡದಾದ ಗೊಬ್ಬರ ಗೋದಾಮು ನಿರ್ಮಿಸಲಾಗಿದೆ ಎಂದರು. ಹಾಗೆ 2020ರಲ್ಲಿ ಸಂಘದ ಆಡಳಿತ ಕಚೇರಿಯನ್ನು ನವೀಕರಣ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ಈಗಿನ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿದೆ ಎಂದ ಮಾದಪ್ಪನವರು ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದೊಡ್ಡದಾದ ಸಿಮೆಂಟ್ ದಾಸ್ತಾನು ಗೋದಾಮು ಹಾಗೂ ಸುಸಜ್ಜಿತವಾದ ಹಾರ್ಡ್‌ವೇರ್ ಮಾರಾಟ ಮಳಿಗೆ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಹೇಳಿದರು.


ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ ಎಂದ ಮಾದಪ್ಪನವರು ಸಂಘವು ಲಾಭವನ್ನು ಹೊಂದಿ ಹಳೆಯ ನಷ್ಟವನ್ನು ಸರಿದೂಗಿಸಿದ ನಂತರ ಸಂಘದ ಸುಸಜ್ಜಿತ ಆಡಳಿತ ಕಚೇರಿ, ಸಭಾಂಗಣ, ವಾಣಿಜ್ಯ ಮಳಿಗೆಗಳನ್ನು ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಪೂರ್ಣ ಮಟ್ಟದಲ್ಲಿ ಇರಬಾರದು ಎಂದು ಅಭಿಪ್ರಾಯಪಟ್ಟ ಮಾದಪ್ಪನವರು, ಪಾರದರ್ಶಕ ಆಡಳಿತ ಹಾಗೂ ಸೇವಾ ಮನೋಭಾವವಿದ್ದಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಪ್ರಬಲವಾಗಿ ಬೆಳೆಯುತ್ತದೆ ಎಂದು ಸಲಹೆ ನೀಡಿದರು.


ಹೆಚ್ಚೆಚ್ಚು ಯುವಶಕ್ತಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ದೇಶದ ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಮುಂದೆ ಬರಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಯವಜನತೆಗೆ ತಮ್ಮ ಸಂದೇಶವನ್ನು ನೀಡಿದರು. ನಮ್ಮ ಮುಂದಿನ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಯುವಶಕ್ತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿರುವ ಪೊನ್ನಚ್ಚಂಡ ಮಾದಪ್ಪನವರು, ಕೋಕೇರಿ ಭಗವತಿ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಹಾಗೂ ರಾಜ್ಯೋತ್ಸವ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಮಿತಿ ಸದಸ್ಯರಾಗಿ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.


ಮೂಲತ: ಕೃಷಿಕರಾಗಿರುವ ಪೊನ್ನಚ್ಚಂಡ ಎಸ್ .ಮಾದಪ್ಪನವರು ದಿವಂಗತ ಪೊನ್ನಚ್ಚಂಡ ಸುಬ್ಬಯ್ಯ ಹಾಗೂ ದಿವಂಗತ ಪೊನ್ನವ್ವನವರ ಕಿರಿಯ ಮಗನಾಗಿದ್ದರೆ. ಪತ್ನಿ ದಮಯಂತಿ ಅವರೊಂದಿಗೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೆರಿ ಗ್ರಾಮದಲ್ಲಿ ಪ್ರಸ್ತುತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತದೆ.ಸಂದರ್ಶನ ದಿನಾಂಕ: 29-03-2021


Search Coorg Media

Coorg's Largest Online Media Network