ಮಂಞೀರ ಸಾಬು ತಿಮ್ಮಯ್ಯ, ಸಹಕಾರಿಗಳು: ಹಾಕತ್ತೂರು - Hakathur

ಮಂಞೀರ ಸಾಬು ತಿಮ್ಮಯ್ಯ, ಸಹಕಾರಿಗಳು:  ಹಾಕತ್ತೂರು - Hakathur


ಮಂಞೀರ ಸಾಬು ತಿಮ್ಮಯ್ಯನವರು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ, ಮಡಿಕೇರಿ-ವಿರಾಜಪೇಟೆ ಸಂಪರ್ಕದ ಹೆದ್ದಾರಿಯ ಮಡಿಕೇರಿಯಿಂದ ಹತ್ತು ಕಿಲೋಮೀಟರ್ ಅಂತರದಲ್ಲಿರುವ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.


ಬಿಳಿಗಿರಿ ಗ್ರಾಮದ ದಿವಂಗತ ದಂಬೆಕೋಡಿ ಸುಬ್ರಮಣಿಯವರ ಆಹ್ವಾನದ ಮೇರೆಗೆ ತುಂತಜ್ಜಿರ ಗಣೇಶ್ ರವರೊಂದಿಗೆ ಸಹಕಾರ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಮಂಞೀರ ಸಾಬು ತಿಮ್ಮಯ್ಯನವರು ಸರಿ ಸುಮಾರು 32 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ತಮ್ಮ 23 ವರ್ಷ ಪ್ರಾಯ 1983 ರಲ್ಲಿ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. 1983 ರಿಂದ 1986,1986 ರಿಂದ 1989,1989 ರಿಂದ 1991 ರವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.


ಅಲ್ಲಿಂದ 1991 ರ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಗೊಂಡ ಸಾಬು ತಿಮ್ಮಯ್ಯನವರು 1997 ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 1997 ರಿಂದ 2002 ರವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿಂದ 2018 ರ ಅಕ್ಟೋಬರ್ ನಿಂದ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸತತವಾಗಿ 9 ಅವಧಿ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದಾಗಿದೆ.


ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20 ರ ಸಾಲಿನಲ್ಲಿ 33.52 ಲಕ್ಷ ಲಾಭ ಪಡೆದಿದೆ ಎಂದ ಮಂಞೀರ ಸಾಬು ತಿಮ್ಮಯ್ಯನವರು ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ, ಗೊಬ್ಬರ ಮಾರಾಟ, ಆಭರಣ ಸಾಲ, ಜಾಮೀನು ಸಾಲ, ವಾಹನ ಸಾಲ, ಸ್ವಸಹಾಯ ಸಂಘಗಳಿಗೆ ನೀಡಿದ ಸಾಲ ಹಾಗೂ ಕೃಷಿ ಸಾಲ ಮುಂತಾದವುಗಳಿಂದ ಸಂಘವು ಲಾಭದ ಹಾದಿಯಲ್ಲಿದೆ ಎಂದು ತಿಳಿಸಿದರು.


ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ಸಿಗುತ್ತಿದೆ ಎಂದ ಸಾಬು ತಿಮ್ಮಯ್ಯನವರು ಮೇಕೇರಿಯಲ್ಲಿ ಸಂಘದಿಂದ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದರು. ಈ ಕಟ್ಟಡದಲ್ಲಿ ಸಭಾಂಗಣ ಹಾಗೂ ಬಾಡಿಗೆ ಮನೆಗಳನ್ನು ನಿರ್ಮಿಸುವ ಕ್ರಿಯಾ ಯೋಜನೆಯು ನಮ್ಮ ಮುಂದಿದೆ ಎಂದರು. ಹಾಗೆಯೇ ಹಾಕತ್ತೂರಿನಲ್ಲಿ 35 ಸೆಂಟ್ ಜಾಗವನ್ನು ತೆಗೆದು ಪೆಟ್ರೋಲ್ ಬಂಕ್ ತೆರೆಯಲು ಪ್ರಯತ್ನ ಸಾಗಿದೆ ಎಂದು ಈ ಸಂದರ್ಭದಲ್ಲಿ ಮಂಞೀರ ಸಾಬು ತಿಮ್ಮಯ್ಯನವರು ತಿಳಿಸಿದರು.


ಸಂಘದ ಆಡಳಿತ ಕಚೇರಿಯ ಗಣಕೀಕರಣ ಹಾಗೂ ನೂತನ ಆಡಳಿತ ಮಂಡಳಿಯ ಸಭಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.


ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟ ಮಂಞೀರ ಸಾಬು ತಿಮ್ಮಯ್ಯನವರು, ಪಾರದರ್ಶಕ ಆಡಳಿತ, ಸದಸ್ಯರ ಸಕಾಲದ ಸಾಲ ಮರುಪಾವತಿ ಸಹಕಾರ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.


ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಯುವಕರು ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುವಂತಾಗಬೇಕು ಎಂದ ಮಂಞೀರ ಸಾಬು ತಿಮ್ಮಯ್ಯನವರು, ಸೇವಾ ಮನೋಭಾವದಿಂದ ಸಹಕಾರ ಕ್ಷೇತ್ರದಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ತಿಳಿಸಿದರು.


ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ತಿಮ್ಮಯ್ಯನವರು ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ, ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯರಾಗಿ, ಮಡಿಕೇರಿ ಕಾಂಗ್ರೆಸ್ಸಿನ ತಾಲೂಕು ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.


ಬಿಳಿಗೇರಿ ಭಗವತಿ ಯುವಕ ಸಂಘದ ಅಧ್ಯಕ್ಷರಾಗಿ, ಬಿಳಿಗೇರಿ ಭಗವತಿ ದೇವಾಲಯ ಅಧ್ಯಕ್ಷರಾಗಿ, ಬಿಳಿಗೇರಿ ಅರ್ಧನಾರೀಶ್ವರ ದೇವಾಲಯದ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಾಬು ತಿಮ್ಮಯ್ಯನವರು ಪ್ರಸ್ತುತ ಮಡಿಕೇರಿ ಕೌಂಟಿ ಕ್ಲಬ್ ಸದಸ್ಯರಾಗಿದ್ದಾರೆ.


ಬಿಳಿಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ ಹಾಗೂ ಹಾಕತ್ತೂರು ಪ್ರೌಢ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಮೂಲತಃ ಕೃಷಿಕರಾಗಿರುವ ಮಂಞೀರ ಸಾಬು ತಿಮ್ಮಯ್ಯನವರು ದಿವಂಗತ ಮಂಞೀರ ಪಳಂಗಪ್ಪ ಹಾಗೂ ದಿವಂಗತ ಅಂಬವ್ವ ದಂಪತಿಯ ಕಿರಿಯ ಪುತ್ರರಾಗಿದ್ದಾರೆ.


ಪತ್ನಿ ವೀಣಾ ಬೋಜಮ್ಮ, ಮಗಳು ಯಶ್ಶಸ್‌ ತಿಮ್ಮಯ್ಯ ಹಾಗೂ ಮಗ ಕಾರ್ತಿಕ್ ತಿಮ್ಮಯ್ಯನವರೊಂದಿಗೆ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ನಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತದೆ.



ಸಂದರ್ಶನ ದಿನಾಂಕ: 22-03-2021



Search Coorg Media

Coorg's Largest Online Media Network 



Previous Post Next Post