ಚೀಯಕಪೂವಂಡ ಎಸ್.ಅಪ್ಪಚ್ಚು, ಸಹಕಾರಿಗಳು: ನೆಲಜಿ - Nelaji

 ಚೀಯಕಪೂವಂಡ ಎಸ್.ಅಪ್ಪಚ್ಚು, ಸಹಕಾರಿಗಳು: ನೆಲಜಿ - Nelaji



ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದಿಂದ ಭಾಗಮಂಡಲ ರಸ್ತೆಯ ಆರು ಕಿಲೋಮೀಟರ್ ಅಂತರದಲ್ಲಿರುವ ನೆಲಜಿ ಗ್ರಾಮದವರಾದ ಚೀಯಕಪೂವಂಡ ಅಪ್ಪಚ್ಚುರವರು ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.


1984 ನೇ ಇಸವಿಯಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದು ಸಹಕಾರ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಅಪ್ಪಚ್ಚುರವರು 2002 ರಿಂದ 2007 ರವರೆಗೆ 2007ರಿಂದ 2011ರವರೆಗೆ ನೆಲಜಿ ಫ್ಯಾಕ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.


2011 ರಿಂದ 2015‌,  2015 ರಿಂದ 2018ರವರಗೆ 2018 ರಿಂದ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಚೀಯಕಪೂವಂಡ ಅಪ್ಪಚ್ಚುರವರು 4ನೇ ಅವಧಿಯಲ್ಲಿ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ನಾಪೋಕ್ಲು ಪಟ್ಟಣದ ಸೆಕ್ರಿಡ್ ಹಾರ್ಟ್ ವಿದ್ಯಾಸಂಸ್ಥೆಯ ಸ್ಥಾಪಕರಾದ ಗಪ್ಪಣ್ಣನವರ ಅಭಿಲಾಷೆ ಮೇರೆಗೆ ಸಹಕಾರ ಕ್ಷೇತ್ರದಲ್ಲಿ ನಾನು ತೊಡಗಿಸಿಕೊಳ್ಳಲು ಮೂಲಕಾರಣ ಎಂದು ಚೀಯಕಪೂವಂಡ ಅಪ್ಪಚ್ಚುರವರು ತಿಳಿಸಿದರು. 1984 ರಿಂದ ಇಲ್ಲಿಯವರೆಗೆ ಅಂದರೆ 37 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅಪ್ಪಚ್ಚುರವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಅಂದರೆ 2019-20 ರ ಅವಧಿಯಲ್ಲಿ  49 ಲಕ್ಷದ 50 ಸಾವಿರ ರೂಪಾಯಿಗಳು ಲಾಭವನ್ನು ಪಡೆದಿದೆ ಎಂದು ಅಧ್ಯಕ್ಷರಾದ ಚೀಯಕಪೂವಂಡ ಅಪ್ಪಚ್ಚುರವರು ತಿಳಿಸಿದರು. ಸಂಘದಿಂದ ಸದಸ್ಯರು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಬಡ್ಡಿ ಸಮೇತ ಮರುಪಾವತಿ ಮಾಡಿರುವುದು, ಗೊಬ್ಬರ ಸಾಲ, ಜಾಮೀನು ಸಾಲ, ವೇತನ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ನೀಡುತ್ತಿರುವುದರಿಂದ ನಮ್ಮ ಸಂಘ ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ಅಧ್ಯಕ್ಷರಾದ ಅಪ್ಪಚ್ಚುರವರು ತಿಳಿಸಿದರು.


18 ಫೆಬ್ರವರಿ 2021 ರಲ್ಲಿ ಒಂದು ಕೋಟಿ 4 ಲಕ್ಷ ವೆಚ್ಚದಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ, ವಾಣಿಜ್ಯ ಸಂಕೀರ್ಣ, ಸಭಾಂಗಣ ಹಾಗೂ ಗೋದಾಮು ಒಳಗೊಂಡ ಸುಸಜ್ಜಿತವಾದ ಕಟ್ಟಡ ಉದ್ಘಾಟನೆಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದ ಅಪ್ಪಚ್ಚುರವರು, ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಲ್ಲಿದೆ ಎಂದು ತಿಳಿಸಿದರು. ನಮ್ಮ ಸಹಕಾರ ಸಂಘವು ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿದೆ ಎಂದು ಅಪ್ಪಚ್ಚು ತಿಳಿಸಿದರು. 


ಸಂಘದ ವತಿಯಿಂದ ಒಂದು ಎಕರೆ ಜಾಗ ಖರೀದಿಯ ಪ್ರಯತ್ನ ಹಾಗೂ ಗೊಬ್ಬರ ದಾಸ್ತಾನಿಗೆ ಪ್ರತ್ಯೇಕವಾದ ಒಂದು ಸುಸಜ್ಜಿತ ಗೋದಾಮನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಚೀಯಕಪೂವಂಡ ಅಪ್ಪಚ್ಚುರವರು ಈ ಸಂದರ್ಭ ತಿಳಿಸಿದರು.


ಸಹಕಾರ ಸಂಘಗಳ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪ ಇರುವುದರಿಂದ ಸಹಕಾರ ಕ್ಷೇತ್ರವು ಪ್ರಗತಿಯತ್ತ ಸಾಗಲು ಅಡಚಣೆಯಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅಪ್ಪಚ್ಚುರುವರು, ಸಿಬ್ಬಂದಿ ನೇಮಕಾತಿ ಹಾಗೆ ಸಹಕಾರ ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಯವರಿಗೆ ಪೂರ್ಣಪ್ರಮಾಣದ ಅಧಿಕಾರವಿರಬೇಕು ಎಂದು ಅಪ್ಪಚ್ಚುರವರು ತಿಳಿಸಿದರು.


ಸಹಕಾರ ಸಂಘಗಳು ಅಭಿವೃದ್ಧಿಯತ್ತ ಸಾಗಲು ಆಡಳಿತ ಮಂಡಳಿಯವರ ಪಾರದರ್ಶಕ ಆಡಳಿತ ವಿರಬೇಕು ಎಂದ ಅಪ್ಪಚ್ಚುರವರು,  ಯುವಕರು ಸೇವಾ ಮನೋಭಾವದಿಂದ ಹೆಚ್ಚು ಹೆಚ್ಚು ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಆಗಬೇಕು ಎಂದು ಯುವಶಕ್ತಿಗೆ ತಮ್ಮ ಸಲಹೆಯನ್ನು ನೀಡಿದರು.


ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಚೀಯಕಪೂವಂಡ ಅಪ್ಪಚ್ಚುರವರು 1986ರಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 


ನೆಲಜಿ ಫಾರ್ಮರ್ಸ್ ಕ್ಲಬ್ ಮಾಜಿ ಉಪಾಧ್ಯಕ್ಷರಾಗಿ ಹಾಗೂ ಹಾಲಿ ಸದಸ್ಯರಾಗಿ, ನೆಲಜಿ ಶ್ರೀ ಇಗುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ನಿರ್ದೇಶಕರಾಗಿ, ನೆಲಜಿ ಗ್ರಾಮದ ಮರಣ ನಿಧಿಯ ನಿರ್ದೇಶಕರಾಗಿ, ಮೇಕಟ್‌ ಕೇರಿ ಮರಣ ನಿಧಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ನೇತಾಜಿ ವಿದ್ಯಾಸಂಸ್ಥೆ ಬಲ್ಲಮಾವಟಿ ಇದರ ಮಾಜಿ ನಿರ್ದೇಶಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.


ಮೂಲತಃ ಕೃಷಿಕರಾಗಿರುವ ಚೀಯಕಪೂವಂಡ ಅಪ್ಪಚ್ಚುರವರು, ತಂದೆ ದಿವಂಗತ ಮುತ್ತಣ್ಣ ಹಾಗೂ ತಾಯಿ ಕಾಮವ್ವ ದಂಪತಿಯ ಪುತ್ರರಾಗಿದ್ದು, ಪತ್ನಿ ಸವಿತಾ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಹಿಂದಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಮಗಳು ತಸ್ಮಾ ಅಪ್ಪಚ್ಚು ಅಂತಿಮ ಬಿ.ಕಾಂ.ನಲ್ಲಿ ಹಾಗೂ ಕಿರಿಯ ಮಗಳು ಭುವನ ಅಪ್ಪಚ್ಚು  ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


ಸಹಕಾರಿಗಳಾದ ಚೀಯಕಪೂವಂಡ ಅಪ್ಪಚ್ಚುರವರು ತಮ್ಮ ಕುಟುಂಬ ಸಮೇತ ನೆಲಜಿ ಗ್ರಾಮದ ಮೇಕಟ್‌ ಕೇರಿಯಲ್ಲಿ ನೆಲೆಸಿದ್ದಾರೆ. ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಆಶಿಸುತ್ತದೆ.



ಸಂದರ್ಶನ ದಿನಾಂಕ: 08-03-2021



Search Coorg Media

Coorg's Largest Online Media Network 



Previous Post Next Post