ನಾಪಂಡ ರ‍್ಯಾಲಿ ಮಾದಯ್ಯ, ಸಹಕಾರಿಗಳು: ಕಾರುಗುಂದ - Kargunda
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದವರಾದ ನಾಪಂಡ ರ‍್ಯಾಲಿ ಮಾದಯ್ಯನವರು ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊಡಗು ಡಿಸಿಸಿ ಬ್ಯಾಂಕಿನ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿದ ದಿವಂಗತ ನಾಪಂಡ ಅಪ್ಪಚ್ಚು ಹಾಗೂ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾಗಿದ್ದ ಶ್ರೀಮತಿ ರಾಣಿ ಪೊನ್ನವ್ವ ದಂಪತಿಗಳ ಪುತ್ರರಾಗಿ 1971 ರಲ್ಲಿ ಜನಿಸಿದ ನಾಪಂಡ ರ‍್ಯಾಲಿ ಮಾದಯ್ಯನವರು ತಮ್ಮ ತಂದೆ-ತಾಯಂದಿರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯಿಂದ ಪ್ರೇರಿತರಾಗಿ 2004ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
2004ರಿಂದ 2009ರವರೆಗೆ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿ 2009ರಿಂದ 2020ರ ಇಲ್ಲಿಯವರೆಗೆ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಾರು ಗುಂದ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ 4ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ನಾಪಂಡ ರ‍್ಯಾಲಿ ಮಾದಯ್ಯನವರು ಪ್ರಸ್ತುತ ಪ್ರತಿನಿಧಿಸುತ್ತಿರುವ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವವು, ಕರ್ನಾಟಕ ರಾಜ್ಯದ ಅಪೆಕ್ಸ್ ಬ್ಯಾಂಕಿನಿಂದ ಸತತ 3 ಬಾರಿ ರಾಜ್ಯಪ್ರಶಸ್ತಿಯನ್ನು ಹಾಗೂ ಕೊಡಗು ಡಿಸಿಸಿ ಬ್ಯಾಂಕಿನಿಂದ 2014-15, 2016-17 ಹಾಗೂ 2019-20 ರಲ್ಲಿ ಪ್ರಶಸ್ತಿಯನ್ನು ಪಡೆದಿರುವುದು ಇವರ ಹೆಗ್ಗಳಿಕೆಯಾಗಿದೆ. ರಾಷ್ಟ್ರೀಯ ವಾಣಿಜ್ಯ ಬ್ಯಾಂಕಿನಲ್ಲಿ ನೀಡುತ್ತಿರುವ ಎಲ್ಲಾ ರೀತಿಯ ಸಾಲವನ್ನು ನಮ್ಮ ಸಹಕಾರ ಸಂಘದಲ್ಲಿ ನೀಡಲಾಗುತ್ತಿದ್ದು, 2019-20 ರ ಸಾಲಿನಲ್ಲಿ ನಮ್ಮ ಸಹಕಾರ ಸಂಘ 16ಲಕ್ಷ ಲಾಭದಲ್ಲಿ ಇದೆ ಎಂದು ಅಧ್ಯಕ್ಷರಾದ ನಾಪಂಡ ರ‍್ಯಾಲಿ ಮಾದಯ್ಯನವರು ತಿಳಿಸಿದರು.
ಇವರ ಅವಧಿಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನೆಲಮಾಳಿಗೆ ಗೋದಾಮು ಮತ್ತು ಮೊದಲ ಮಾಳಿಗೆಯಲ್ಲಿ ಸಭೆ-ಸಮಾರಂಭಗಳನ್ನು ನಡೆಸಲು ಸಭಾಂಗಣವನ್ನು ನಿರ್ಮಿಸಿದ್ದಾರೆ. ಈ ಕಟ್ಟಡವು 2018ರಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕ ಸೇವೆಗೆ ತೆರೆದುಕೊಂಡಿದೆ.
ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 70 ಸೆಂಟು ವಿಸ್ತೀರ್ಣ ಜಾಗವನ್ನು ಹೊಂದಿದ್ದು, ಮುಂದಿನ ಕ್ರಿಯಾಯೋಜನೆಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ, ಸಂಘದ ಆಡಳಿತ ಕಚೇರಿಯ ಕಟ್ಟಡದ ಮೇಲಿನ ಅಂತಸ್ತು ನಿರ್ಮಾಣ ಹಾಗೂ ಸಭಾಂಗಣಕ್ಕೆ ಹೊಂದಿಕೊಂಡಂತೆ ಭೋಜನಾಲಯ ನಿರ್ಮಿಸಲಾಗುವುದು ಎಂದು ಶ್ರೀ ನಾಪಂಡ ರ‍್ಯಾಲಿ ಮಾದಯ್ಯನವರು ಮಾಹಿತಿ ನೀಡಿದರು. ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಇದುವರೆಗಿನ ಒಟ್ಟು ಆಸ್ತಿ ಅಂದಾಜು ವೆಚ್ಚ 2 ಕೋಟಿ ರೂಪಾಯಿಗಳು.
ಸಹಕಾರ ಕ್ಷೇತ್ರ ಇನ್ನಷ್ಟು ಉತ್ತಮಗೊಳ್ಳುವ ಬಗ್ಗೆಗಿನ ಪ್ರಶ್ನೆಗೆ ನಾಪಂಡ ರ‍್ಯಾಲಿ ಮಾದಯ್ಯನವರು “ರೈತರಿಗೆ ಸಕಾಲದಲ್ಲಿ ಸಾಲವನ್ನು ವಿತರಿಸಬೇಕು. ಅದೇ ರೀತಿ ಸಾಲ ಮರುಪಾವತಿ ಯಾಗಬೇಕು. ಆಡಳಿತ ಮಂಡಳಿ ಶುದ್ಧಹಸ್ತದಿಂದ ಇರಬೇಕು. ಆಡಳಿತ ಪಾರದರ್ಶಕದಿಂದ ಕೂಡಿರಬೇಕು” ಎಂದು ತಮ್ಮಸಲಹೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಮುಂದಿನ ಯುವಶಕ್ತಿಗೆ ನಾಪಂಡ ರ‍್ಯಾಲಿ ಮಾದಯ್ಯನವರ ಸಂದೇಶ:
“ಹೆಚ್ಚಿನ ಸಂಖ್ಯೆಯ ಯುವಜನರು ಸಹಕಾರ ಸಂಘದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಸ್ವ- ಉದ್ಯೋಗವನ್ನು ಕೈಗೊಂಡು ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವಂತಾಗಬೇಕೆಂದು” ತಿಳಿಸಿದರು.
ಹಿರಿಯ ಸಹಕಾರಿಗಳಾದ ನಾಪಂಡ ರ‍್ಯಾಲಿ ಮಾದಯ್ಯನವರು ಸಹಕಾರ ಹೊರತುಪಡಿಸಿ ಇನ್ನಿತರ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದಾರೆ. ಮೂಲತಃ ಕೃಷಿಕರಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಎರಡು ಬಾರಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾಗಿ, ಮೂರು ಬಾರಿ ಮಡಿಕೇರಿ ತಾಲ್ಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿಗಳಾಗಿ, ಮಡಿಕೇರಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿ, ಕೃಷಿ ಮೋರ್ಚಾದ ರಾಜ್ಯಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ: ತಲಕಾವೇರಿ ಭಗಂಡೇಶ್ವರ ದೇವಾಲಯ ಸಮಿತಿಯ ಸದಸ್ಯರಾಗಿ, ಕಾರುಗುಂದ ಭಗವತಿ ದೇವಾಲಯ ಸಮಿತಿಯ ಸದಸ್ಯರಾಗಿ, ನಾಪಂಡ ಫ್ಯಾಮಿಲಿ ಫಂಡ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
49 ವರ್ಷ ಪ್ರಾಯದ ನಾಪಂಡ ರ‍್ಯಾಲಿ ಮಾದಯ್ಯನವರು ತಾಯಿ ರಾಣಿ ಪೊನ್ನವ್ವ, ಪತ್ನಿ ಸವಿತಾ, ಮಕ್ಕಳಾದ ಗಣಪತಿ ಮತ್ತು ಪಳಂಗಪ್ಪ ಅವರೊಂದಿಗೆ ಕಾರುಗುಂದದಲ್ಲಿ ನೆಲೆಸಿದ್ದಾರೆ. ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ಹಾರೈಸುತ್ತದೆ.
ಸಂದರ್ಶನದ ದಿನಾಂಕ: 26-11-2020
Search Coorg Media
Coorg's Largest Online Media Network